ಶಿವಮೊಗ್ಗ:ನಿನ್ನೆ ಮಾಜಿ ಸಿಎಂ ಯಡಿಯೂರಪ್ಪನವರ ಮನೆ ಮೇಲೆ ನಡೆದ ಕಲ್ಲು ತೂರಾಟ ಹೊರ ಜಿಲ್ಲೆಗಳಿಂದ ಬಂದ ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಶಿಕಾರಿಪುರದ ಬಂಜಾರ ಮುಖಂಡರು ತಿಳಿಸಿದ್ದಾರೆ. ಶಿಕಾರಿಪುರ ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡರುಗಳು ನಿನ್ನೆ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿನ್ನೆ ಎಲ್ಲಾ ಸರಿಯಾಗಿಯೇ ಇತ್ತು. ತಾಲೂಕು ಆಫೀಸ್ ಗೆ ಮನವಿ ಕೊಡುವವರಿದ್ದೆವು. ಈ ವೇಳೆ ಪೊಲೀಸರು ಮೂರು ಗೇಟುಗಳನ್ನು ಬಂದ್ ಮಾಡಿದ್ದರು.
ಅಷ್ಟೆ ಅಲ್ಲ, ಬ್ಯಾರಿಕೇಡ್ ಹಾಕಿ ಜನರನ್ನು ಕಂಟ್ರೋಲ್ ಮಾಡಲಿಲ್ಲ. ಇದು ಪೊಲೀಸರ ವೈಫಲ್ಯ ಎಂದು ಹೇಳಲು ಬಯಸುತ್ತೇನೆ. ನಮ್ಮಲ್ಲಿನ ಕೆಲ ಕಿಡಿಗೇಡಿಗಳು ಹೊರ ಜಿಲ್ಲೆಯಿಂದ ಬಂದು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕುಮ್ಮಕ್ಕು ಕೊಟ್ಟು ಕಿಡಿಗೇಡಿಗಳು ಮಾಹಿತಿ ನೀಡಿ ನಮ್ಮ ನಾಯಕರ ಮನೆಯ ಮೇಲೆ ಕಲ್ಲು ಎಸೆದು, ದೊಂಬಿಯನ್ನು ಮಾಡಿರುತ್ತಾರೆ. ಇದಕ್ಕೆ ತಾಲೂಕು ಬಿಜೆಪಿಯಿಂದ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಈ ಘಟನೆಯಿಂದ ನಮ್ಮ ನಾಯಕರುಗಳಿಗೆ ತೀವ್ರ ನೋವಾಗಿದೆ. ನಮ್ಮ ನಾಯಕರು ನಮ್ಮ ಜನಾಂಗಕ್ಕೆ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಅವರ ಸಹಕಾರ ಇದೇ ರೀತಿ ಮುಂದೆ ಇರಲಿ, ಅವರು ನಮ್ಮ ಸಮಾಜದ ಬಗ್ಗೆ ಅನುಮಾನ ಹೊಂದುವುದು ಬೇಡ. ನಮ್ಮ ಸಮಾಜಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸೊರಗೊಂಡನಕೊಪ್ಪ ಅಭಿವೃದ್ಧಿ ಪಡಿಸಿದ್ದಾರೆ. ನಮ್ಮಜನಾಂಗದ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ತಾಂಡಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಾಂಕ್ರಿಟ್ ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಲಭ್ಯವನ್ನು ಒದಗಿಸಿದ್ದಾರೆ. ಶಾಲಾ ಕಾಲೇಜು, ವಿದ್ಯುತ್ ಸೌಲಭ್ಯ ಸೇರಿದಂತೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.