ಶಿವಮೊಗ್ಗ:ಒಳ ಮೀಸಲಾತಿ ಕಡಿತ ಖಂಡಿಸಿ ಹಾಗೂ ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧನವಾಗಿರುವ ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ನಗರದ ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮಹತ್ವದ ಸಭೆ ನಡೆಯಿತು. ಇದೇ ವೇಳೆ ಮುಂದೆ ನಡೆಯುವ ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಮೀಸಲಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾನ್ಯನಾಯ್ಕ ಮಾತನಾಡಿ, ಮಾ.30 ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಂದು ಧರಣಿ ನಡೆಯುವ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಅಥವಾ ಸಂಸದ ಬಿ.ವೈ ರಾಘವೇಂದ್ರ ಯಾರಾದರು ಒಬ್ಬರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣದಲ್ಲಿ ಬಂಧನವಾಗಿರುವ ಯುವಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲವಾದರೇ ಅನಿರ್ದಿಷ್ಟ ಅವಧಿಯವರೆಗೆ ಧರಣಿ ಮಾಡಲಾಗುತ್ತದೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಧರಣಿಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಸೇರಿ ಸುಮಾರು 10 ಸಾವಿರ ಜನ ಸೇರುತ್ತಾರೆ ಎಂದು ಹೇಳಿದರು.
ಬಂಜಾರ್ ಸಮುದಾಯಕ್ಕೆ ಒಳ ಮೀಸಲಾತಿ ಕಡಿತಗೊಳಿಸಿರುವುದನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ್ ರಾಜಾವತ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ಪಿಂಡ ಪ್ರಧಾನ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ವಿನಯ್ ರಾಜಾವತ್ ಮನವೊಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಂಡ ಪ್ರಧಾನ ಕಾರ್ಯಕ್ರಮವನ್ನು ಇಂದು ಕೈ ಬಿಡುತ್ತಿದ್ದೇನೆ. 30ನೇ ತಾರೀಖಿನಂದು ಪಿಂಡ ಪ್ರಧಾನ ಮಾಡುತ್ತೇನೆ ಎಂದು ಹೇಳಿದರು.