ಶಿವಮೊಗ್ಗ:ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಂಜಾರ್ ಕನ್ವೆನ್ಷನ್ ಹಾಲ್ ಅನ್ನು ಸೋಮವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ಮೋದಿಯವರು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 52 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಐದು ಸಾವಿರ ಹಕ್ಕು ಪತ್ರ ತಯಾರಿ ಇದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ. ಬಂಜಾರ್ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ. ಸೊರಗೊಂಡನ ಕೊಪ್ಪವನ್ನು ಪ್ರವಾಸೋದ್ಯಮ ಸ್ಥಳವಾಗಿ ಮಾಡಲಾಗಿದೆ" ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ಇತಿಹಾಸದ ಪುಟದಲ್ಲಿ ಬರೆದಿಡುವ ಕಾರ್ಯಕ್ರಮವಿದು. ಕಷ್ಟದ ಬದುಕನ್ನು ಬದುಕುವ ಶ್ರಮಜೀವಿಗಳು ಬಂಜಾರರು. ಯಡಿಯೂರಪ್ಪನವರ ಆಡಳಿತದ ಅವಧಿಯಲ್ಲಿ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ರೈಲ್ವೆ, ಏರ್ ವೇ ಹೀಗೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಮಾಡಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮದ ಮೂಲಕ ತಾಂಡಗಳ ಅಭಿವೃದ್ಧಿ ಆಗುತ್ತಿದೆ. ಇದೇ ಫೆ.27 ರಂದು ವಿಮಾನ ನಿಲ್ದಾಣ ಕೂಡ ಉದ್ಘಾಟನೆ ಆಗಲಿದೆ. ಜಾತಿ-ಭೇದ ಮಾಡದೇ ಅಭಿವೃದ್ಧಿ ಮಾಡಿದ ನಾಯಕ ಯಡಿಯೂರಪ್ಪ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ಬ್ರಿಟಿಷ್‌ರಿಗೆ ಹಾಗೂ ಮೊಘಲರ ಜೊತೆ ವ್ಯಾಪಾರ ನಡೆಸುತ್ತಿದ್ದ ಜನಾಂಗ ಈ ಬಂಜಾರ ಸಮುದಾಯ. ನನ್ನ ಚುನಾವಣೆಗೆ ಈ ಸಮುದಾಯ ಹಣ ನೀಡಿತ್ತು. ಇಲ್ಲಿ ಪ್ರತಿ ಮಕ್ಕಳಿಗೂ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ತಾಂಡಾ ಜನರ ಋಣ ನಾನೆಂದು ಮರೆಯುವುದಿಲ್ಲ. ಶ್ರೀಮಂತ ಸಂಸ್ಕೃತಿ ಹೊಂದಿರುವ ಸಮಾಜವೆಂದರೆ ಅದು ಬಂಜಾರ್ ಸಮಾಜ" ಎಂದರು.