ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ತನಿಖೆ ನಡೆಸುತ್ತಿರುವ ಶಿವಮೊಗ್ಗ ಪೊಲೀಸರ ತಂಡದೊಂದಿಗೆ ಬೆಂಗಳೂರು ಪೊಲೀಸರ ತಂಡವೂ ಇದೀಗ ಕೈಜೋಡಿಸಿದೆ.
ಬೆಂಗಳೂರಿನಿಂದ ತನಿಖಾ ತಂಡ ಬಂದಿದೆ ಎಂದು ಮಾಹಿತಿ ನೀಡಿರುವ ಶಿವಮೊಗ್ಗ ಪೊಲೀಸ್ ಇಲಾಖೆ, ಬಂದಿರುವ ತನಿಖಾ ತಂಡದಲ್ಲಿ ಯಾವೆಲ್ಲಾ ಅಧಿಕಾರಿಗಳಿದ್ದಾರೆ ಹಾಗು ಅವರು ಶಿವಮೊಗ್ಗ ಪೊಲೀಸರಿಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಈಗಾಗಲೇ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಆದರೆ, ಹತ್ಯೆ ಪ್ರಕರಣದ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನವಿರುವ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ. ಹೀಗಾಗಿ ಹರ್ಷ ಹತ್ಯೆ ಪ್ರಕರಣದಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ.
ಕ್ಯಾಂಪಸ್ ಗಳಲ್ಲಿ ಕೇಸರಿ ಶಾಲು ವಿತರಿಸಿದ್ದನಾ ಹರ್ಷ?:ಹರ್ಷ ಕೊಲೆಯ ಪ್ರಮುಖ ಆರೋಪಿ ಖಾಸಿಪ್ಗೂ ಹಾಗೂ ಹರ್ಷ ನಡುವೆ 2015ರಿಂದಲೂ ದ್ವೇಷವಿತ್ತು. ಹೀಗಾಗಿ ಖಾಸಿಪ್ ವೈಯಕ್ತಿಕ ದ್ವೇಷದಿಂದ ಹರ್ಷನನ್ನು ತನ್ನ ಸಹಚರರೊಂದಿಗೆ ಸೇರಿ ಕೊಲೆ ಮಾಡಿದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಹಿಜಾಬ್ ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಿ ಹರ್ಷ ಕಾಲೇಜು ಕ್ಯಾಂಪಸ್ ಗಳಲ್ಲಿ ಕೇಸರಿ ಶಾಲುಗಳನ್ನು ವಿತರಿಸಿದ್ದ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಹರ್ಷನ ಮೇಲೆ ಕೆಲವರು ಕಿಡಿಕಾರಲಾರಂಭಿಸಿದ್ದರು. ಇದೇ ಕಾರಣಕ್ಕಾಗಿಯೇ ಹರ್ಷ ಕೊಲೆಯಾಗಿದೆಯೇ ಎಂಬ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.
ಕೊಲೆಯಾದ ಹರ್ಷ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಹರ್ಷ ಭಾಗಿಯಾಗಿದ್ದ. ಇದೇ ಕಾರಣದಿಂದ ಹರ್ಷ ಜೈಲಿಗೂ ಹೋಗಿಬಂದಿದ್ದ ಎನ್ನಲಾಗ್ತಿದೆ. ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಹರ್ಷ ಕೊಲೆಯಾದನೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ಹರ್ಷ ಹತ್ಯೆ ಪ್ರಕರಣ ಸಂಬಂಧ ಮಾಹಿತಿ ನೀಡಿದ ಎಸ್ಪಿ ಫೇಸ್ ಬುಕ್ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ :ಹರ್ಷ ಹಿಂದೂ ಸಂಘಟನೆಗಳ ಮುಂಚೂಣಿ ನಾಯಕನಾಗಿದ್ದ. ಹೀಗಾಗಿ ಈತ ಹಲವರ ವಿರೋಧವನ್ನೂ ಕಟ್ಟಿಕೊಂಡಿದ್ದ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಯಾರಾದರೂ ಖಾಸಿಫ್ ಹಾಗೂ ಸಹಚರರನ್ನು ಬಳಸಿಕೊಂಡು ಹರ್ಷನನ್ನು ಕೊಲೆ ಮಾಡಿಸಿದ್ದಾರಾ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ. ಹರ್ಷ ಪ್ರಖರ ಹಿಂದುತ್ವವಾದಿ. ಈತ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಒಮ್ಮೆ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದ. ಹೀಗಾಗಿ ಕೆಲ ಸಂಘಟನೆಗಳ ಹೆಸರಿನಲ್ಲಿ ಹರ್ಷನಿಗೆ ಬೆದರಿಕೆ ಕರೆಗಳೂ ಬಂದಿದ್ದವು. ಯಾವುದಾದರೂ ಸಂಘಟನೆಗಳು ಹರ್ಷನನ್ನು ಕೊಲೆ ಮಾಡಿಸಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಕೊಲೆಗೆ ಬಳಸಿಕೊಂಡಿದ್ದು ಸೆಕೆಂಡ್ ಹ್ಯಾಂಡ್ ಕಾರು:ಹರ್ಷ ಹತ್ಯೆಗೆ ಆರೋಪಿಗಳು ಛತ್ತಿಸ್ಘಡ್ ನೋಂದಣಿಯ ಕಾರನ್ನು ಬಳಕೆ ಮಾಡಿಕೊಂಡಿದ್ದು, ಈ ಕಾರಿನ ಮೂಲ ಬೆನ್ನತ್ತಿ ಹೋದ ಪೊಲೀಸರಿಗೆ ಅದು ಸೆಕೆಂಡ್ ಹ್ಯಾಂಡ್ ಕಾರು ಎಂಬುದು ಸ್ಪಷ್ಟವಾಗಿದೆ. ಹರ್ಷ ಹತ್ಯೆ ಪ್ರಕರಣದಲ್ಲಿ ಭದ್ರಾವತಿಯ ಜಿಲಾನ್ ಹಾಗೂ ಆತನ ತಂದೆ ಜಾಫರ್ ಸಾಧಿಕ್ ಅಲಿಯಾಸ್ ಭದ್ರುದ್ದೀನ್ ಬಂಧನಕ್ಕೊಳಗಾಗಿದ್ದಾರೆ. ಈ ಜಾಫರ್ ಸಾಧಿಕ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮತ್ತು ಬ್ರೋಕರ್ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯ ಬಳಿ ಈ ಸ್ವಿಫ್ಟ್ ಕಾರನ್ನು ಖರೀದಿಸಲಾಗಿತ್ತು. ಇದೇ ಕಾರನ್ನು ಇದೀಗ ಹರ್ಷ ಕೊಲೆ ಮಾಡಲು ಬಳಸಿಕೊಳ್ಳಲಾಗಿತ್ತು ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಕಲ್ಲು ತೂರಾಟ ನಡೆಸಿದವರ ವಿರುದ್ಧ ಕ್ರಮ:ಕೊಲೆಯಾದ ಹರ್ಷನ ಅಂತಿಮಯಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದವರ ಬಂಧನಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ 41 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇನ್ನೆರಡು ದಿನಗಳಲ್ಲಿ ಕಲ್ಲು ತೂರಾಟ ನಡೆಸಿದವರ ಬಂಧನ ಆರಂಭಿಸುವ ಸಾಧ್ಯತೆಯಿದೆ. ಈಗಾಗಲೇ ಸಿಸಿಟಿವಿ ಫೂಟೇಜ್ ಹಾಗೂ ವಿಡಿಯೋಗಳನ್ನು ಆಧರಿಸಿ ಕಲ್ಲು ತೂರಾಟ ನಡೆಸಿದವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದ್ದು, ಶೀಘ್ರವೇ ಅವರನ್ನು ಬಂಧಿಸುವುದಾಗಿ ಎಸ್ ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಹರ್ಷ ಹತ್ಯೆ ಪ್ರಕರಣ ತನಿಖೆ ಇದೀಗ ತೀವ್ರಗತಿಯಲ್ಲಿ ಸಾಗಿದೆ. ಕೊಲೆ ಆರೋಪಿಗಳನ್ನು 11 ದಿನ ಪೊಲೀಸ್ ಕಸ್ಟಡಿಗೆ ಪಡೆದಿರುವ ಪೊಲೀಸರು ಬೆಂಗಳೂರು ತಂಡದ ಸಹಾಯದೊಂದಿಗೆ ತನಿಖೆ ನಡೆಸುತ್ತಿದ್ದು, ಇನ್ನೊಂದಿಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಯಿದೆ.