ಶಿವಮೊಗ್ಗ:ಸೊರಬ ಸಾಗುವಳಿ ರೈತರ ವಿರೋಧದ ನಡುವೆಯೂ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಸರ್ಪಗಾವಲಿನಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ತೆರವುಗೊಳಿಸಿದರು. ತಾಳಗುಪ್ಪ ಗ್ರಾಮದ ಸರ್ವೆ ನಂ. 20ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಅನಧಿಕೃತವಾಗಿ ಸಾಗುವಳಿ ಮಾಡಿದ ಜಮೀನಿನ ಸುತ್ತ ಅಗಳ ಹೊಡೆಯುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು.
ಈ ಪೈಕಿ ಅನಧಿಕೃತವಾಗಿ ಸಾಗುವಳಿ ಮಾಡಿದ ಆರು ಮಂದಿಯ ಪೈಕಿ ಇಬ್ಬರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಉಳಿದ ನಾಲ್ವರು ರೈತರ ಜಮೀನಿನ ಸುತ್ತ ಅಗಳ ಹೊಡೆಯಲಾಯಿತು. ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಹಾಗೂ ನಮೋ ವೇದಿಕೆ ಮುಖಂಡರು ಮತ್ತು ರೈತರು ತೆರವು ಕಾರ್ಯಾಚರಣೆ ಕೈ ಬಿಡುವಂತೆ ಪಟ್ಟು ಹಿಡಿದರು. ಅಧಿಕಾರಿಗಳ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರು, ಪಟ್ಟು ಬಿಡದ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಅಕ್ರಮ ಸಾಗುವಳಿ ಮಾಡಿದ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಹೆಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಅಕ್ರಮ ಸಾಗುವಳಿ ಮಾಡಿದ ಬಡ ರೈತರ ಹಿತ ಕಾಯುವಲ್ಲಿ ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ರಕ್ಷಣೆ ನೀಡುವಲ್ಲಿ ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ವಿಫಲರಾಗಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಿ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಲಾಗುತ್ತಿದೆ. ಮಧು ಬಂಗಾರಪ್ಪ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಗರ್ ಹುಕುಂ ರೈತರಿಗೆ ರಕ್ಷಣೆ ನೀಡಿದ್ದರು. ಮುಂದಿನ ದಿನಗಳಲ್ಲಿ ವಿವಿಧ ಹಂತದ ಹೋರಾಟವನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.