ಶಿವಮೊಗ್ಗ: ಪ್ರಧಾನಿ ಮೋದಿ ಅವರ 8 ವರ್ಷದ ಸಮರ್ಥ ಅಭಿವೃದ್ಧಿಯ ಆಡಳಿತದ ಫಲವಾಗಿ 2024 ರಲ್ಲಿ ಮತ್ತೊಮ್ಮೆ ಬಿಜೆಪಿ ರಾಷ್ಟ್ರಾದ್ಯಂತ ವಿಜೃಂಭಿಸಲಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಅವರು ಕಳೆದ 8 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದ್ದಾರೆ. ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ. ಕೋಟ್ಯಂತರ ಜನ ಇದರ ಪ್ರಯೋಜನ ಪಡೆದಿದ್ದಾರೆ.
ಅವರ 8 ವರ್ಷದ ಸಾಧನೆ ಅಷ್ಟದಿಕ್ಕುಗಳಲ್ಲಿಯೂ ಪಸರಿಸಿದೆ. ಪ್ರಧಾನಿ ಅವರೇ ಹೇಳುವಂತೆ ನಾನೊಬ್ಬ ಸೇವಕ ಎಂದು ದೇಶದ ಸಮಗ್ರ ಅಭಿವೃದ್ಧಿಯ ಜೊತೆಗೆ ರಕ್ಷಣೆ, ಆಂತರಿಕ ಭದ್ರತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಪ್ರಧಾನಿ ಮೋದಿ ಅವರು ಕೊರೊನಾ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಜನರ ಪ್ರಾಣಗಳನ್ನು ರಕ್ಷಿಸಿದ್ದಾರೆ. ಅನೇಕ ಬಡರಾಷ್ಟ್ರಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ. ಅವರ ವಿದೇಶಾಂಗ ನೀತಿ ಜಗತ್ತಿನ ಗಮನಸೆಳೆದಿದೆ. 110 ಕ್ಕೂ ಹೆಚ್ಚು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ. 60 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ಅಮೆರಿಕದ ಸಂಸತ್ ಭವನ ಕೂಡ ಅವರನ್ನು ಅಭಿನಂದಿಸಿದೆ. ಆಂತರಿಕ ಭದ್ರತೆಯ ವಿಷಯದಲ್ಲಿ ಇಡೀ ವಿಶ್ವವೇ ಅಚ್ಚರಿಪಡುವಷ್ಟು ಕ್ರಮ ತೆಗೆದುಕೊಂಡಿದ್ದಾರೆ. ಕಾಶ್ಮೀರ ವಿಷಯ, ಅರುಣಾಚಲ ಪ್ರದೇಶದಲ್ಲಿ ರಕ್ಷಣೆ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ, ಪಾಕಿಸ್ತಾನವನ್ನು ಒಂಟಿಯಾಗಿ ಮಾಡಿದ್ದು ಇತಿಹಾಸ ಎಂದರು.
370 ನೇ ವಿಧಿಯನ್ನು ತೆಗೆದುಹಾಕಿರುವುದು, ರಾಮಮಂದಿರ ಸೇರಿದಂತೆ ಇಡೀ ರಾಷ್ಟ್ರಾದ್ಯಂತ ಹಿಂದೂ ದೇವಾಲಯಗಳ ಪುನರುಜ್ಜೀವನಗೊಳಿಸಿರುವುದು. ಯೋಗಕ್ಕೆ ಒತ್ತುಕೊಟ್ಟಿದ್ದು, ಉಕ್ರೇನ್ ಯುದ್ಧದಲ್ಲಿ 23 ಸಾವಿರ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದು ಮೋದಿ ಅವರ ಸಾಧನೆ ಎಂದು ಸಂಸದ ಬಿ ವೈ ರಾಘವೇಂದ್ರ ಕೊಂಡಾಡಿದರು.