ಶಿವಮೊಗ್ಗ: ಎರಡನೇ ಶಬರಿಮಲೈ ಎಂದು ಖ್ಯಾತಿ ಪಡೆದಿರುವ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಮಕರ ಸಂಕ್ರಾಂತಿಯ ಅಂಗವಾಗಿ ಪ್ರತಿ ವರ್ಷ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತೆ. ಕೇರಳದ ಶಬರಿ ಮಲೆಯಲ್ಲಿ ನಡೆಯುವ ಎಲ್ಲಾ ಸಂಪ್ರದಾಯಗಳು ಇಲ್ಲಿ ಜರುಗುವುದು ವಿಶೇಷವಾಗಿದೆ.
ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮದಲ್ಲಿ ಇರುವ ಅಯ್ಯಪ್ಪ ಸ್ವಾಮಿ ಸನ್ನಿದಾನ ಕರ್ನಾಟಕದ ಶಬರಿ ಮಲೆ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಶಬರಿಮಲೆಯಲ್ಲಿ ಅಯ್ಯಪ್ಪನಿಗೆ ನಡೆಸುವ ಎಲ್ಲಾ ವಿಧಿ ವಿಧಾನಗಳನ್ನು ಇಲ್ಲೂ ನಡೆಸುವುದು ವಿಶೇಷ. ಬೆಜ್ಜವಳ್ಳಿಯನ್ನು ಹರಿಹರತ್ಮಾಜ ಪೀಠ ಎಂದು ಕರೆಯುತ್ತಾರೆ. ಇಂದು ಪೀಠದ ಸಂತೋಷ ವಿಶ್ವಭಾರತಿ ಶ್ರೀಪಾದಂಗಳ ಅವರ ಪೀಠಾರೋಹಣದ ವರ್ಧಂತೋತ್ಸವವನ್ನು ಸಹ ಆಚರಿಸಲಾಯಿತು. ಶಬರಿಮಲೆಗೆ ಹೋಗಲು ಆಗದವರು ಇಲ್ಲಿಗೆ ಬೆಜ್ಜವಳ್ಳಿಯ ಅಯ್ಯಪ್ಪನ ಸನ್ನಿಧಿಗೆ ಬಂದು ದರ್ಶನ ಪಡೆಯುವುದು ವಿಶೇಷವಾಗಿದೆ.
ಶಬರಿಮಲೆಯಂತೆ ತಿರುವಭರಣ ಉತ್ಸವ ವಿಶೇಷ: ಅಯ್ಯಪ್ಪ ಸ್ವಾಮಿಯು ರಾಜ ವಂಶಸ್ಥ. ಇವರು ಎಲ್ಲಾವನ್ನು ಬಿಟ್ಟು ಕಾಡಿಗೆ ಬಂದು ಭಕ್ತರನ್ನು ಕಾಪಾಡಲು ನೆಲೆಸುತ್ತಾರೆ. ಆದರೆ ರಾಜಕುಮಾರನಾದ ಅಯ್ಯಪ್ಪನಿಗೆ ವರ್ಷಕ್ಕೊಮ್ಮೆ ಅರಮನೆಯಿಂದ ಆಭರಣಗಳನ್ನು ತಂದು ತೊಡಿಸಿ, ಪೂಜೆ ನಡೆಸಲಾಗುತ್ತದೆ. ಶಬರಿ ಮಲೆಯಲ್ಲಿ ಆಭರಣಗಳು ರಾಜಮನೆತನದ ಮನೆಯಿಂದ ಬರುತ್ತದೆ. ಅದರಂತೆ ಬೆಜ್ಜವಳ್ಳಿಯಲ್ಲಿ ಗುರು ಮನೆಯಿಂದ ಸನ್ನಿಧಿಗೆ ಆಭರಣವನ್ನು ಪೆಟ್ಟಿಗೆಯ ಮೆರವಣಿಗೆ ಮೂಲಕ ತರಲಾಗುತ್ತದೆ. ಈ ವೇಳೆ ಆಭರಣವನ್ನು ಅತ್ಯಂತ ವೈಭವವಾಗಿ ಮೆರವಣಿಗೆಯಲ್ಲಿ ತರಲಾಗುತ್ತದೆ. ಮೆರವಣಿಗೆಯಲ್ಲಿ ವೀರಗಾಸೆ, ಗೊಂಬೆ ಕುಣಿತ, ಚಂಡೆ ಮದ್ದಳೆಯ ಸಮೇತ ಚಾಮರಗಳ ಸಮೇತವಾಗಿ ಸನ್ನಿದಾನಕ್ಕೆ ತರಲಾಗುತ್ತದೆ. ಜೊತೆಗೆ ವಿವಿಧ ದೇವತೆಗಳನ್ನು ಆಹ್ವಾನ ನಡೆಸಿ ಮೆರವಣಿಗೆಯ ಮೂಲಕ ಕರೆದುಕೊಂಡು ಬರಲಾಗುತ್ತದೆ.
ಮೆರವಣಿಗೆಯಿಂದ ತಂದ ಆಭರಣಗಳನ್ನು ಹರಿಹರ ಪುತ್ರನಿಗೆ ತೊಡಿಸಿ, ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಭಕ್ತರು ತಂಡೋಪತಂಡವಾಗಿ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದುಕೊಳ್ಳುತ್ತಾರೆ. ಈ ವೇಳೆ ಇಷ್ಟಾರ್ಥ ನೆರವೇರಿಸಿದರೆ, ತುಲಾಭಾರ ನಡೆಸುತ್ತಾರೆ. ಅದರಂತೆ ಇಂದು ಕೇಂದ್ರದ ರಕ್ಷಣಾ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ಆಗಮಿಸಿದ್ದು, ಅವರು ಸಹ ತುಲಾಭಾರ ನಡೆಸಿದರು.