ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಿಗಬೇಕಾದಂತಹ ಸವಲತ್ತುಗಳು ಸಿಗದೇ ಅನ್ಯಾಯವಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ 10ನೇ ವರ್ಷದ ದಿನಾಚರಣೆ ಮತ್ತು ಇಲಾಖಾ ನಿರ್ದೇಶಕರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಆಯನೂರು ಮಂಜುನಾಥ್, ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಅತ್ಯಂತ ಮಹತ್ವದ್ದು ಎಂದು ಹೇಳಿದ್ರು.
ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವೈಖರಿಯಲ್ಲಿ ವ್ಯತ್ಯಾಸವಾದರೆ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಂತಹ ನೌಕರರಿಗೆ ಇಂದು ಕನಿಷ್ಠ ವೇತನವಿದೆ. ಆದರೆ ಸರ್ಕಾರದ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ಸಿಗದಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಇರುತ್ತದೆ. ಇವರನ್ನು ಮಾಹಿತಿ ಕಣಜ ಎಂದು ಕರೆದರೆ ತಪ್ಪಾಗಲಾರದು. ಈ ಬಗ್ಗೆ ಸದನದ ಒಳಗೆ ಹಾಗೂ ಹೊರಗೆ ಧ್ವನಿ ಎತ್ತುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಮುಂಚೂಣಿಯಲ್ಲಿ ನಿಂತು ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ್, ಇಲಾಖೆಯ ಅಧಿಕಾರಿಗಳಾದ ಚಂದ್ರಪ್ಪ, ದಿವಾಕರ್, ಸಂಘಟನೆಯ ಪದಾಧಿಕಾರಿಗಳಾದ ಜಯಲಕ್ಷ್ಮಿ, ಪ್ರೇಮಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.