ಶಿವಮೊಗ್ಗ: ಈಶ್ವರಪ್ಪ ಅವರು ನಿಯಂತ್ರಣವಿಲ್ಲದ ಮಾತು ಹಾಗೂ ಪುತ್ರ ವ್ಯಾಮೋಹದ ಎರಡು ಶತ್ರುಗಳಿಂದ ಚುನಾವಣಾ ರಾಜಕೀಯದಿಂದ ನಿರ್ಗಮನವಾದಂತೆ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. ಇಂದು ತಮ್ಮ ನೂತನ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ವರ್ಷ ಒಂದೇ ತರಹದ ರಾಜಕಾರಣ ಇತ್ತು. ಈಶ್ವರಪ್ಪನವರು ತಮ್ಮ ಧೀರ್ಘ ಕಾಲ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈಶ್ವರಪ್ಪ ಅವರ ನಿರ್ಗಮನ ಶಿವಮೊಗ್ಗದ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ ಎಂದರು.
ಸುಧೀರ್ಘವಾದ ರಾಜಕಾರಣ ಮಾಡಿದ ಈಶ್ವರಪ್ಪ ಅವರಿಗೆ ವ್ಯಕ್ತಿಗತ ಶತ್ರು ಯಾರೂ ಇಲ್ಲ. ಅವರು ಎಲ್ಲರ ಜೊತೆ ಆತ್ಮೀಯವಾಗಿ ಇದ್ದರು. ಈಶ್ವರಪ್ಪ ಅವರ ನಿರ್ಗಮನ ಆದ ರೀತಿ ನಿರಾಶಾದಾಯಕ ಮತ್ತು ಆಘಾತಕಾರಿ. ಇನ್ನು ಅವರಿಗೆ ಇಬ್ಬರೇ ಶತ್ರುಗಳಿದ್ದು, ಒಂದು ನಿಯಂತ್ರಣವಿಲ್ಲದ ಅವರ ಮಾತು, ಮತ್ತೊಂದು ಅವರ ಮನೆಯಲ್ಲಿಯೇ ಇದ್ದ ಶತ್ರು ಪುತ್ರ ವ್ಯಾಮೋಹ. ಪುತ್ರ ವ್ಯಾಮೋಹ ಬಿಟ್ಟಿದ್ದರೆ ಅವರ ಸಚಿವ ಸ್ಥಾನ ಹೋಗುತ್ತಿರಲಿಲ್ಲ. ಈಶ್ವರಪ್ಪ ಅವರು ತನ್ನದಲ್ಲದ ತಪ್ಪಿಗೆ ಇಂದು ಚುನಾವಣೆಯಿಂದ ನಿರ್ಗಮಿಸುತ್ತಿದ್ದಾರೆ. ಅವರ ನಿರ್ಗಮನಕ್ಕೆ ಯಾರೂ ಕಾರಣರಲ್ಲ. ಅವರಿಗೆ ಒಳ್ಳೆಯದಾಗಲಿ ಎಂದರು.
ಫೆ.2 ರಂದು ನನಗೆ ಮತ ನೀಡಿದ ಪದವೀಧರ ಮತದಾರರಿಗೆ ಪತ್ರ ಬರೆದಿದ್ದೆ. ವಿಧಾನ ಪರಿಷತ್ನಲ್ಲಿ ನನ್ನ ಹೋರಾಟಕ್ಕೆ ಫಲಿತಾಂಶ ಸಿಗುತ್ತಿಲ್ಲ. ವಿಧಾನಸಭೆಗೆ ಅವಕಾಶ ದೊರೆತರೆ ಸ್ಪರ್ಧಿಸುವ ಆಂಕಾಕ್ಷೆ ಹೊಂದಿದ್ದೆ ಅಂತಾ ಬರೆದಿದ್ದೆ. ಹೀಗಾಗಿ ಈಶ್ವರಪ್ಪ ಚುನಾವಣಾ ಕಣದಿಂದ ಹಿಂದೆ ಸರಿಯುವುದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಈಶ್ವರಪ್ಪ ನಿರ್ಗಮನ ಬೇಸರ ತರಿಸಿದೆ. ಆದರೆ, ಈಶ್ವರಪ್ಪ ಅವರ ನಿವೃತ್ತಿ ನಂತರ ನನ್ನ ಬೆಂಬಲ ಜಾಸ್ತಿಯಾಗಿದೆ. ಈಶ್ವರಪ್ಪ ಜೊತೆ ನನಗೆ ವ್ಯಕ್ತಿಗತವಾದ ಪೈಪೋಟಿ, ದ್ವೇಷ ಇರಲಿಲ್ಲ. ನಾನು ಈಗಲೂ ವಿಧಾನಸಭೆ ಸ್ಪರ್ಧೆ ಆಂಕಾಕ್ಷಿಯಾಗಿದ್ದೇನೆ. ನನಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆ ಇದೆ. ನನ್ನ ಈ ಮಾತಿನಿಂದ ಯಾವುದೇ ಬದಲಾವಣೆ ಇಲ್ಲ ಎಂದರು.