ಶಿವಮೊಗ್ಗ:ಎರಡು ಪಕ್ಷಗಳ ರಾಷ್ಟ್ರೀಯ ನಾಯಕರುಗಳು ಬಂದಾಗ ರಾಜ್ಯದಲ್ಲಿ ಹೇಗೆ ಜನ ಸೇರ್ತಾರೂ ಹಾಗೆ ಒಂಟಿ ಸಲಗದಂತೆ ಕುಮಾರಸ್ವಾಮಿ ಬಂದಾಗಲೂ ಅಷ್ಟೇ ಜನ ಸೇರ್ತಾರೆ ಎಂದು ಶಿವಮೊಗ್ಗ ನಗರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಇಂದು ಶಿವಮೊಗ್ಗದ ನವಲೆ ಬಡಾವಣೆಯ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿ ಅವರು ಮಾತನಾಡಿದರು.
ಜನರ ಪ್ರತಿಕ್ರಿಯೆ ಮತ್ತಷ್ಟು ಧೈರ್ಯ ಹಾಗೂ ಉತ್ಸಾಹವನ್ನು ತುಂಬಿದೆ. ಇಂದಿನಿಂದ ಪ್ರಚಾರ ಪ್ರಾರಂಭ ಮಾಡಿ ಕೊನೆಯವರೆಗೂ ಇದೇ ವೇಗವನ್ನು ಉಳಿಸಿಕೊಂಡು ಗೆಲುವಿನ ದಡವನ್ನು ಸೇರುತ್ತೇವೆ ಎಂಬ ಭರವಸೆ ಇದೆ. ವಿರೋಧ ಪಕ್ಷದವರ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರೆ, ನಮ್ಮದು ಚಾಪೆ ಕೆಳಗೆ ನೀರು ಹರಿಯುತ್ತಿದೆ. ವಿಶೇಷವಾಗಿ ಒಂದಿಷ್ಟು ಸಮುದಾಯವನ್ನು ಜೆಡಿಎಸ್ನ ಅಧ್ಯಕ್ಷ ಹಿಡಿದಿಟ್ಟುಕೊಂಡಿದ್ದಾರೆ. ಇನ್ನೊಂದಿಷ್ಟನ್ನು ಪ್ರಸನ್ನ ಅವರು ಬುಡಮೇಲು ಮಾಡುತ್ತಿದ್ದಾರೆ. ಬದಲಾವಣೆ ಬಯಸುವಂತಹ ವಾತಾವರಣ ಜನರಲ್ಲಿ ಇರುವುದರಿಂದ ನಾವು ನಮ್ಮ ತಂತ್ರಗಾರಿಕೆಯನ್ನು ಬಿಟ್ಟುಕೊಟ್ಟರೆ ಎದುರಾಳಿಗಳಿಗೆ ನಮ್ಮ ಗುಟ್ಟನ್ನು ಬಿಟ್ಟುಕೊಟ್ಟಂತೆ ಆಗುತ್ತದೆ ಎಂದರು.
ಒಂದು ಹಂತದಲ್ಲಿ ಇಬ್ಬರು ಅಭ್ಯರ್ಥಿಗಳು ಸಮವಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಇಬ್ಬರನ್ನು ದಾಟಿ ಮುಂದೆ ಹೋಗುತ್ತೇವೆ ಎಂದರು. ರಾಷ್ಟ್ರೀಯ ಪಕ್ಷಗಳಿಂದ ಕಾರ್ಯಕರ್ತರು ಬಂದು ಸೇರ್ಪಡೆಯಾಗುತ್ತಾರೆ. ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಕುರಿತು ಜನ ನಿರಾಸೆಯನ್ನು ಹೊಂದಿದ್ದಾರೆ. ಅವರ ಸ್ವಭಾವ ಹಾಗೂ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ಗೆ ಖಚಿತವಾಗಿ ಮತ ನೀಡುತ್ತಾರೆ. ಅತಿ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗಳಿಸುತ್ತದೆ. ಸ್ವಂತ ಕಾಲ ಮೇಲೆ ಅಲ್ಲದೇ ಹೋದರು ಜೆಡಿಎಸ್ ನೇತೃತ್ವದಲ್ಲೇ ಸರ್ಕಾರ ರಚನೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.