ಶಿವಮೊಗ್ಗ: ಯಡಿಯೂರಪ್ಪನವರು ರಾಜಕೀಯದಲ್ಲಿ ಆರೋಗ್ಯವಾಗಿ ಹಾಗೂ ಸಕ್ರಿಯರಾದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರತಿಕ್ರಿಯಿ ನೀಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರ ರೆಸ್ಟ್ ತೆಗೆದುಕೊಳ್ಳಲಿ ಎಂದಿದ್ದ ಡಿ.ಕೆ. ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪನವರು ರಾಜಕೀಯದಲ್ಲಿ ಸಕ್ರಿಯರಾದ್ದಾರೆ. ಈ ಹೇಳಿಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅನ್ವಯಿಸುತ್ತದೆ ಹೊರೆತು ಯಡಿಯೂರಪ್ಪನವರಿಗಲ್ಲ ಎಂದರು.
ಡಿಕೆಶಿ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರತಿಕ್ರಿಯೆ ಯಡಿಯೂರಪ್ಪನವರು ರಾಜಕೀಯದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಆದರೆ, ಒಂದು ಕಡೆ ದೇವೇಗೌಡರಿಗೆ 86 ವರ್ಷವಾಗಿದ್ದು ಇನ್ನೊಂದು ಕಡೆ ಕುಮಾರಸ್ವಾಮಿ ಅವರಿಗೆ ಏಳೆಂಟು ಆಪರೇಷನ್ಗಳಾಗಿವೆ ಹಾಗಾಗಿ, ಅವರು ರೆಸ್ಟ್ ತೆಗೆದುಕೊಳ್ಳಲಿ ಎಂಬುವುದನ್ನ ಡಿ.ಕೆ. ಶಿವಕುಮಾರ್ ನೇರವಾಗಿ ಹೇಳಲಾಗದೇ ಯಡಿಯೂರಪ್ಪನವರ ಹೆಸರಿನ ಮೇಲೆ ಪರೋಕ್ಷವಾಗಿ ಅವರಿಗೆ ಹೇಳಿದ್ದಾರೆ ಎಂದು ಟಾಂಗ್ ನೀಡಿದರು.
ಮುಂದುವರೆದು ಮಾತನಾಡಿದ ಆಯನೂರು, ನೂರು ಡಿಕೆಶಿಗಳು ಬಂದರು ಜಿಲ್ಲೆಯಲ್ಲಿ ರಾಘವೇಂದ್ರ ಅವರನ್ನು ಸೋಲಿಸುವುದು ಅಸಾಧ್ಯ. ಜಿಲ್ಲೆಯಲ್ಲಿ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮಂಡ್ಯದಲ್ಲಿ ಒಬ್ಬ ಹೆಣ್ಣು ಮಗಳನ್ನ ಸೋಲಿಸಲು ಇಡೀ ಮೈತ್ರಿ ಪಕ್ಷ ತಿಣುಕಾಡುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೋ ಒಂದು ಪಕ್ಷದ ಅಭ್ಯರ್ಥಿಯನ್ನ ಎರವಲು ಪಡೆಯುವ ಮೂಲಕ ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನ ಮಾಡಲಾಗಿದೆ ಎಂದರು. ಮಧು ಬಂಗಾರಪ್ಪನವರಿಗೆ ಜಿಲ್ಲೆಯಲ್ಲಿ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಡಿಕೆಶಿ ಅವರ ಬೆನ್ನು ಬಿದ್ದಿದ್ದಾರೆ. ಆದರೆ, ಇದು ಬಳ್ಳಾರಿ ಅಲ್ಲ ಎಂಬುದನ್ನು ಡಿಕೆಶಿ ನೆನಪಿಟ್ಟುಕೊಳ್ಳಬೇಕು ಎಂದರು.