ಶಿವಮೊಗ್ಗ: ಮಲೆನಾಡಲ್ಲಿ ಮಳೆಗಾಲ ಬಂದ್ರೆ ಸಾಕು ಆಟೋ ಚಾಲಕರಿಗೆ ಒಳ್ಳೆಯ ದುಡಿಮೆ. ಮಳೆಯಲ್ಲಿ ಓಡಾಡಲು ಹೆಚ್ಚಿನ ಜನ ಆಟೋವನ್ನ ಅವಲಂಬಿಸಿರುತ್ತಾರೆ. ಈ ಬಾರಿಯ ಮಳೆಗಾಲದ ದುಡಿಮೆಯನ್ನು ಕೊರೊನಾ ವೈರಸ್ ಕಿತ್ತುಕೊಂಡಿದೆ.
ಹೌದು ಕೊರೊನಾ ಲಾಕ್ಡೌನ್ನಿಂದ ಆಟೋ ಓಡಿಸುವ ಕಾರ್ಯ ಒಂದು ರೀತಿಯಲ್ಲಿ ಸ್ಥಗಿತವಾಗಿದೆ ಎಂದೇ ಹೇಳಬಹುದು. ಇದರಿಂದ ಆಟೋ ಚಾಲಕರಿಗೆ ದುಡಿಮೆ ಇಲ್ಲ ಎಂಬಂತಾಗಿದೆ. ಆಟೋ ಚಾಲಕರು ತಮ್ಮ ಆಟೋ ಮಾರುವ ಸ್ಥಿತಿಗೆ ತಲುಪಿದ್ದಾರೆ. ಇನ್ನು ಕೊರೊನಾ ಭೀತಿಗೆ ಸುಸ್ತಾದ ಆಟೋ ಚಾಲಕರು, ಬ್ಯಾಂಕ್ ಹಾಗೂ ಸಂಘಗಳ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ.
ಸಾಲದ ಹೊರೆಯಲ್ಲಿ ಆಟೋ ಚಾಲಕರು ಲಾಕ್ಡೌನ್ ಬಳಿಕ ಆಟೋ ಕಡೆ ಮುಖ ಮಾಡದ ಜನ: ಲಾಕ್ಡೌನ್ ಮುಗಿದ ನಂತರ ಪ್ರಯಾಣಿಕರು ಆಟೋ ಕಡೆ ಮುಖ ಮಾಡುತ್ತಿಲ್ಲ. ಕಾರಣ ಕೊರೊನಾ ಭಯ. ಆಟೋದಲ್ಲಿ ಪ್ರಯಾಣ ಮಾಡಿದರೆ ತಮಗೆ ಕೊರೊನಾ ಬರುವ ಭಯದಲ್ಲಿ ಪ್ರಯಾಣಿಕರು ಆಟೋದಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯ ನಂತರ ಸರ್ಕಾರ ಆಟೋದಲ್ಲಿ ಒಬ್ಬರೆ ಪ್ರಯಾಣ ಮಾಡಬೇಕು. ಅಲ್ಲದೇ ಆಟೋದಲ್ಲಿ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಫೈಬರ್ ಶೀಟ್ ಹಾಕಬೇಕು ಎಂಬ ನಿಯಮವನ್ನು ಆರ್ಟಿಒ ಜಾರಿಗೆ ತಂದಿತ್ತು. ಇದರಿಂದ ಜನ ಆಟೋವನ್ನು ಹತ್ತಲು ಹಿಂದೇಟು ಹಾಕುವಂತೆ ಮಾಡಿದೆ.
ಬಸ್ ಹಾಗೂ ರೈಲು ಸಂಚಾರ ಇಲ್ಲದ ಕಾರಣ ಗ್ರಾಮೀಣ ಭಾಗದ ಜನ ನಗರದತ್ತ ಮುಖ ಮಾಡುತ್ತಿಲ್ಲ. ಅಲ್ಲದೇ ಬರುವವರು ಸಹ ತಮ್ಮದೆ ಸ್ವಂತ ವಾಹನಗಳಲ್ಲಿ, ಬಾಡಿಗೆ ಕಾರಿನಲ್ಲಿ ಬರುವುದರಿಂದ ಜನ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿದೆ. ಲಾಕ್ಡೌನ್ಗಿಂತ ಮೊದಲು ಕನಿಷ್ಠ ನಿತ್ಯ 500 ರೂ. ದುಡಿಮೆ ಮಾಡುತ್ತಿದ್ದ ಆಟೋ ಚಾಲಕರು ಈಗ 100 ರೂ. ದುಡಿಮೆ ಮಾಡುವುದು ಕಷ್ಟಕರವಾಗಿದೆ.
ಸಾಲದ ಹೊರೆಯಲ್ಲಿ ಚಾಲಕರು: ಲಾಕ್ಡೌನ್ನಲ್ಲಿ ಸರ್ಕಾರ 3 ತಿಂಗಳು ಸಾಲ ಮರುಪಾವತಿ ಮಾಡುವಂತಿಲ್ಲ. 3 ತಿಂಗಳ ನಂತರ ಸಾಲ ಮರುಪಾವತಿ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿಳಿಸಿದ್ದರೂ ಬ್ಯಾಂಕ್ನವರು ಬಡ್ಡಿ ಸಮೇತ ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಸಣ್ಣ ಫೈನಾನ್ಸ್ ಹಾಗೂ ಸ್ವ- ಸಹಾಯ ಸಂಘದವರು ಸಾಲ ಮರುಪಾವತಿಗೆ ಕಾಟ ನೀಡಲು ಪ್ರಾರಂಭಿಸಿದ್ದಾರೆ.
ಒಂದು ಕಡೆ ದುಡಿಮೆ ಇಲ್ಲದೇ ಸಂಸಾರ ನಡೆಸಲು ಪರದಾಟ ನಡೆಸುತ್ತಿರುವಾಗ ಬ್ಯಾಂಕ್, ಸಂಘಗಳು ಸಾಲ ಮರುಪಾವತಿಗೆ ಕಾಟ ನೀಡಲು ಶುರು ಮಾಡಿವೆ. ಕೆಲ ಆಟೋಗಳನ್ನು ಫೈನಾನ್ಸ್ನವರು ಸೀಜ್ ಮಾಡಿದ್ದಾರೆ. ಇನ್ನೂ ಕೆಲವು ಸೀಜ್ ಮಾಡುವುದಾಗಿ ಬೆದರಿಸಿ ಹೋಗಿದ್ದಾರೆ. ನಮಗೆ ದುಡಿಮೆ ಇದ್ದರೆ ನಾವು ಸಾಲ ಮರುಪಾವತಿ ಮಾಡುತ್ತೇವೆ. ದುಡಿಮೆಯೇ ಇಲ್ಲದೆ ಹೋದ್ರೆ ಹೇಗೆ ಸಾಲ ಮರುಪಾವತಿ ಮಾಡುವುದು ಎಂಬ ಅಳಲು ಆಟೋ ಚಾಲಕರದ್ದಾಗಿದೆ. ಹಲವು ಆಟೋ ಚಾಲಕರು ತಮ್ಮ ವೃತ್ತಿ ಬಿಟ್ಟು ಬೇರೆ ವೃತ್ತಿ ಕಡೆ ಮುಖ ಮಾಡಿದ್ದಾರೆ.