ಶಿವಮೊಗ್ಗ: ಲಾಕ್ಡೌನ್ನಲ್ಲಿ ಸಂಕಷ್ಟ ಅನುಭವಿಸಿದ್ದ ಆಟೋ ಚಾಲಕರು ಇದೀಗ ಲಾಕ್ಡೌನ್ ಸಡಿಲಿಕೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ತಂದಿರುವ ಹೊಸ ನಿಯಮ ಆಟೋ ಚಾಲಕರನ್ನು ಮತ್ತೆ ಸಂಕಷ್ಟಕ್ಕೆ ನೂಕಿದೆ.
ಕೊರೊನಾ ಹರಡದಂತೆ ತಡೆಯುವ ದೃಷ್ಟಿಯಿಂದ ಆಟೋಗಳಲ್ಲಿ ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳಲಿ ಎಂದು ಆಟೋದಲ್ಲಿ ಡ್ರೈವರ್ ಹಿಂಭಾಗದಲ್ಲಿ ಪಾರದರ್ಶಕತೆಯ ಫೈಬರ್‌ಶೀಟ್ ಅಳವಡಿಸಲು ಸೂಚಿಸಲಾಗಿದೆ. ಹಾಗಾಗಿ ಆಟೋ ಚಾಲಕರು ತಮ್ಮ ತಮ್ಮ ಆಟೋದಲ್ಲಿ ಫೈಬರ್ ಬದಲು, ಪ್ಲಾಸ್ಟಿಕ್ ಕವರ್ ಸೇರಿ ಫೈಬರ್ ಮಾದರಿಯ ಶೀಟ್ಗಳನ್ನು ಅಳವಡಿಸಿಕೊಂಡಿದ್ದಾರೆ.
ಕೊರೊನಾ ಮಾನದಂಡಗಳಿಂದಾಗಿ ಆಟೋಚಾಲಕರಿಗೆ ಸಂಕಷ್ಟ.. ಫೈಬರ್ ಕವರ್ ಹಾಕಿಕೊಂಡರೆ ಯಾವುದೇ ದಂಡವಿಲ್ಲ. ಈ ಫೈಬರ್ ಕವರ್ಗೆ 2,500 ರೂ. ಆಗುತ್ತದೆ. ಬೇರೆ ಬೇರೆ ಶೀಟ್ ಹಾಕಿಕೊಂಡವರನ್ನು ತಡೆದು ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಿದ್ದಾರೆ. ಲಾಕ್ಡೌನ್ನಲ್ಲಿ ದುಡಿಮೆಯೇ ಇಲ್ಲದಂತೆ ಆಗಿದೆ. ಅದರಲ್ಲೀಗ ಆಟೋಗಳನ್ನು ಹಿಡಿದು 200-300 ರೂ. ದಂಡ ಹಾಕಿದರೆ ಬದುಕು ಸಾಗಿಸುವುದು ಹೇಗೆ ಎಂಬುದು ಆಟೋ ಚಾಲರ ಅಳಲು.
ದಯಮಾಡಿ ನಮಗೆ ಎಲ್ಲಾ ರೀತಿಯ ಸೌಕರ್ಯವಾಗುವಂತಹ ಫೈಬರ್ ಅಳವಡಿಸಿಕೊಳ್ಳಲು ಅವಕಾಶ ಮಾಡಿ ಕೊಡಬೇಕು ಎನ್ನುತ್ತಾರೆ ಆಟೋಚಾಲಕರು. ಇನ್ನೂ ಆಟೋ ಸಾಲದ ಕಂತನ್ನು ಮೂರು ತಿಂಗಳು ಬಿಟ್ಟು ಕಟ್ಟಲು ಹೇಳಿದ್ದಾರೆ. ಆದರೆ, ಬಡ್ಡಿ ಹಾಕುತ್ತಿರುವುದು ಖಂಡನೀಯ. ಲಾಕ್ಡೌನ್ನಲ್ಲಿ ಸಹಾಯ ಮಾಡುವ ರೂಪದಲ್ಲಿ ಬಡ್ಡಿ ವಸೂಲಿ ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಟೋ ಚಾಲಕರು ಆಕ್ರೋಶ ಹೊರ ಹಾಕಿದರು.