ಶಿವಮೊಗ್ಗ: ಸದ್ಯಕ್ಕೆ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ವಯೋಮಿತಿ ಹೆಚ್ಚಳ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೊಲೀಸ್ ಮತ್ತು ಮಿಲಿಟರಿ ಬೇರೆ ಇಲಾಖೆ ಥರ ಅಲ್ಲ. ದೈಹಿಕವಾಗಿ ಪ್ರಬಲವಾಗಿರಬೇಕು. ಸಣ್ಣ ವಯಸ್ಸಿನಲ್ಲಿ ನೇಮಕ ಮಾಡಿಕೊಂಡರೆ ಅವರಿಂದ ತುಂಬಾ ಉಪಯೋಗ ಇದೆ. ಈ ದೃಷ್ಟಿಯಿಂದ ಎರಡು ವರ್ಷ ಹೆಚ್ಚು ಮಾಡಬೇಕು ಎಂಬ ಚರ್ಚೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಸದ್ಯಕ್ಕೆ ವಯೋಮಿತಿ ಹೆಚ್ಚಳದ ಬಗ್ಗೆ ಹೇಳಲ್ಲ ಎಂದರು.
ಪಿಎಸ್ಐ ಪ್ರಕರಣ ಕೋರ್ಟ್ನಲ್ಲಿದೆ. ಇದೇ ನೋಟಿಫಿಕೇಶನ್ ಒಳಗೆ ಆದರೆ, ವಯೋಮಿತಿ ಸಡಿಲಿಕೆ ಅಗತ್ಯ ಇಲ್ಲ. ಹಾಗಾಗದೇ ರದ್ದಾಗಿ, ಹೊಸದಾಗಿ ಪರೀಕ್ಷೆ ಆಗಬೇಕೆಂದರೆ ಆಗ ವಯೋಮಿತಿ ನಿಗದಿ ಪಡಿಸುತ್ತೇವೆ ಎಂದು ತಿಳಿಸಿದರು.
ಭೂತಾನ್ ಅಡಕೆ ಆಮದು ಬಗ್ಗೆ ಆತಂಕ ಬೇಡ:ಬೇರೆ ಬೇರೆ ದೃಷ್ಟಿಯಿಂದ ಭೂತಾನ್ ನಮ್ಮ ದೇಶಕ್ಕೆ ಅಗತ್ಯವಿದೆ.ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳಾಗಿವೆ. ಸರ್ಕಾರ ಬದಲಾದ ಕೂಡಲೇ ಒಪ್ಪಂದವನ್ನು ಮುರಿಯಲು ಸಾಧ್ಯವಿಲ್ಲ. ನಮ್ಮಲ್ಲಿ ಬೆಳೆದಂತಹವುಗಳನ್ನು ಅಲ್ಲಿಗೆ, ಅಲ್ಲಿ ಬೆಳೆದಂತವುಗಳನ್ನು ಇಲ್ಲಿಗೆ ಆಮದು ರಪ್ತು ಮಾಡಿಕೊಳ್ಳಬಹುದು ಎನ್ನುವ ಪ್ರೀಟ್ರೇಡ್ ಒಪ್ಪಂದ ಆಗಿದೆ.
ಈ ಹಿನ್ನೆಲೆಯಲ್ಲಿ ಭೂತಾನ್ನವರು ನಮ್ಮ ಅಡಕೆಯನ್ನು ನೀವು ಆಮದು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 17 ಸಾವಿರ ಹಸಿ ಅಡಕೆ ಒಣ ಅಡಕೆ ಅಲ್ಲ, ಹಸಿ ಅಡಕೆಗೆ 12 ಶೇ ಒಣ ಅಡಿಕೆ ಬರುತ್ತದೆ. ಅದರಲ್ಲೂ ಆ ಅಡಕೆ ಸಮುದ್ರ ಮಾರ್ಗದಲ್ಲೇ ಬರಬೇಕು ಎನ್ನುವ ಷರತ್ತು ಇದೆ. ಇದೆಲ್ಲಾ ಆಗಿ ಅಡಕೆ ಭಾರತ ಸೇರಬೇಕಾದರೆ ಕನಿಷ್ಠ 15 ದಿನಗಳಾದರೂ ಬೇಕು. ಅಷ್ಟು ದಿನಗಳಲ್ಲಿ ಅಡಿಕೆ ಹಾಳಾಗುತ್ತದೆ. ಹಾಗಾಗಿ ಅಡಕೆ ಭಾರತಕ್ಕೆ ತಲುಪುವುದೇ ಅನುಮಾನ.