ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.
ತೀರ್ಥಹಳ್ಳಿಯ ಕಾಲೇಜ್ ವಿದ್ಯಾರ್ಥಿಯೊಬ್ಬ ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವುದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಂತಹ ವಿಡಿಯೋ ರಿಲೀಸ್ ಮಾಡುವ ಅವಶ್ಯಕತೆ ಇಲ್ಲ, ಇಂತಹ ಅಶ್ಲೀಲತೆ ಯಾರಿಗೂ ಶೋಭೆ ತರುವುದಿಲ್ಲ. ಅವರು ಯಾವುದೇ ಸಂಘಟನೆಯಲ್ಲಿದ್ದರೂ ಸಹ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು. ಅವನೊಬ್ಬ ಕೊಳಕು ಮನುಷ್ಯ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ :ಅಶ್ಲೀಲ ವಿಡಿಯೋ ಪ್ರಭಾವ : 4ರ ಬಾಲೆಯ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ
ತಾಲೂಕಿನಲ್ಲಿ ನಡೆದ ಯಾವುದೋ ಒಂದು ಘಟನೆಯನ್ನು ಇಟ್ಟುಕೊಂಡು ಏನನ್ನೂ ಹೇಳುವುದಕ್ಕೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಗಾಂಜಾ, ಅಫೀಮು ಮಾರಾಟ ಹೆಚ್ಚಾಗಿ ಆರಂಭವಾಗಿದೆ. ಇದನ್ನು ಮಟ್ಟ ಹಾಕಲು ಪೋಷಕರು ಗಮನ ಹರಿಸಬೇಕು. 3 - 4 ದಿನದಲ್ಲಿ ಶಾಲಾ ಕಾಲೇಜು ಮುಖ್ಯಸ್ಥರು ಹಾಗೂ ಪೊಲೀಸರ ಸಭೆ ಕರೆದು ಚರ್ಚೆ ಮಾಡ್ತೇನೆ. ಕೇವಲ ತೀರ್ಥಹಳ್ಳಿ ಅಲ್ಲ, ರಾಜ್ಯದ ಎಲ್ಲ ಕಡೆ ಇದು ಇದೆ ಎಂದರು.