ಶಿವಮೊಗ್ಗ: ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಾಲಿ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕಿರುವ ಕುರಿತು ನನಗೆ ಮಾಹಿತಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ ಕುರಿತ ವಿಚಾರಣೆ ಕೋರ್ಟ್ ನಲ್ಲಿದೆ. ಜನವರಿ 16 ರಂದು ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಕೋರ್ಟ್ನಿಂದ ಏನು ತೀರ್ಪು ಬರುತ್ತದೆ ಎಂಬುದನ್ನು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ನಮ್ಮ ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದೆ. ವಾಜಪೇಯಿ ಅವರು ಪ್ರಧಾನಮಂತ್ರಿಯಾದಾಗ ಸರ್ವ ಶಿಕ್ಷಣ ಅಭಿಯಾನ ಜಾರಿಗೆ ತಂದರು. ಈ ಯೋಜನೆಯಡಿ ಎಲ್ಲಾ ಗ್ರಾಮದಲ್ಲೂ ಶಾಲೆ ಇರಬೇಕು ಎಂದು ಪ್ರತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಲಾಗಿದೆ. ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರಾಗಿದ್ದಾಗ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಕೊಠಡಿ ನಿರ್ಮಾಣಕ್ಕೆ ಒತ್ತು ನೀಡಿಲ್ಲ: ಇನ್ನು ಶಿಕ್ಷಕರ ನೇಮಕಾತಿಗೆ ಕಾಂಗ್ರೆಸ್ ಸರ್ಕಾರ ಒತ್ತು ನೀಡಿರಲಿಲ್ಲ. ಕಾಂಗ್ರೆಸ್ ಶಿಕ್ಷಕರ ನೇಮಕಾತಿ, ಕೊಠಡಿಗಳ ನಿರ್ಮಾಣವನ್ನು ಮಾಡಿಲ್ಲ. ಕೊಠಡಿಗಳನ್ನು ನೋಡಿದ್ರೆ ಗಾಬರಿ ಆಗುತ್ತದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಐದು ವರ್ಷಗಳಲ್ಲಿ ಒಟ್ಟು 3,617 ಶಾಲಾ ಕೊಠಡಿ ನಿರ್ಮಾಣ ಮಾಡಿದ್ದರು. ಆಡಳಿತಾವಧಿಯ ಕೊನೆ ವರ್ಷದಲ್ಲಿ 5 ಸಾವಿರ ಕೊಠಡಿಗಳ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಅದು ಪೂರ್ಣಗೊಂಡಿರಲಿಲ್ಲ.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೊಠಡಿ ನಿರ್ಮಾಣದಲ್ಲಿ ಆಸಕ್ತಿ ತೋರಿಸಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ 8 ಸಾವಿರ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಇರುವಾಗ ಸುಮಾರು 3 ಸಾವಿರಕ್ಕೂ ಅಧಿಕವಾಗಿ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು. ಈಗ ಸುಮಾರು 13000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಫೆಬ್ರವರಿಯಲ್ಲಿ ಸುಮಾರು 2500 ಪ್ರೌಢ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಿದರು.