ಶಿವಮೊಗ್ಗ: ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ವಿಮಾ ಕಂಪನಿಗಳು ಹಾಗೂ ಸರ್ಕಾರ ಶೀಘ್ರವೇ ಬೆಳೆ ವಿಮೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೊರಬದಲ್ಲಿ ಜಿ.ಪಂ ಸದಸ್ಯ ಶಿವಲಿಂಗೇಗೌಡ ಆಗ್ರಹಿಸಿದರು.
ಬೆಳೆ ವಿಮೆ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಜಿಪಂ ಸದಸ್ಯನ ಆಗ್ರಹ
ಕಳೆದ ವರ್ಷ ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಗೆ ಅಡಕೆ, ಭತ್ತ ಹಾಗೂ ಜೋಳ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿತ್ತು. ಸರ್ಕಾರ ಈ ವರೆಗೆ ಬೆಳೆ ವಿಮೆ ಜಾರಿ ಮಾಡಿಲ್ಲ. ಶೀಘ್ರವೇ ಬೆಳೆ ವಿಮೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ ಸದಸ್ಯ ಶಿವಲಿಂಗೇಗೌಡ ಆಗ್ರಹಿಸಿದರು.
ಕೊರೊನಾ ಸಂಕಷ್ಟಕ್ಕೆ ಸಿಲುಕಿ ರೈತರು ಸಮಸ್ಯೆಯಲ್ಲಿದ್ದಾರೆ. ಈ ನಡುವೆಯೇ 2019-20 ರಲ್ಲಿ ಭತ್ತ ಮತ್ತು ಜೋಳಕ್ಕೆ ಜಿಲ್ಲೆಯಲ್ಲಿ ಸುಮಾರು 27 ಸಾವಿರ ರೈತರು ವಿಮೆ ಪಾವತಿಸಿದ್ದಾರೆ. ಅಡಕೆಗೆ ಸುಮಾರು 15,571 ರೈತರು ಸುಮಾರು 8.36 ಕೋಟಿ ರೂ. ವಿಮಾ ಕಂತನ್ನು ಪಾವತಿಸಿದ್ದು, ಈವರೆಗೂ ವಿಮಾ ಮೊತ್ತ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಆಗಸ್ಟ್, ಸೆಪ್ಟೆಂಬರ್ನಲ್ಲಿ ಸುರಿದ ಭಾರಿ ಮಳೆಗೆ ಅಡಕೆ, ಭತ್ತ ಹಾಗೂ ಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿತ್ತು. ಭತ್ತ ಮತ್ತು ಜೋಳಕ್ಕೆ ಜನವರಿ, ಫೆಬ್ರವರಿಯಲ್ಲಿ ಮತ್ತು ಅಡಕೆಗೆ ಜೂನ್ ತಿಂಗಳಿನಲ್ಲಿಯೇ ವಿಮಾ ಮೊತ್ತ ಬಿಡುಗಡೆ ಮಾಡಬೇಕಿತ್ತು. ಆದರೆ, ಇನ್ನೂ ವಿಮೆ ಬಿಡುಗಡೆಯಾಗಿಲ್ಲ. ಸ್ಥಳೀಯ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಸರ್ಕಾರದ ಮತ್ತು ವಿಮಾ ಕಂಪನಿಗಳ ಗಮನ ಸೆಳೆದು ಕಳೆದ ಸಾಲಿನ ಬೆಳೆ ವಿಮೆ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.