ಶಿವಮೊಗ್ಗ:ವಾಜಪೇಯಿ ಬಡಾವಣೆಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಯಾದವ್ ಒತ್ತಾಯಿಸಿದ್ದಾರೆ.
ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಮಲ್ಲಿಗೆನಹಳ್ಳಿಯಲ್ಲಿ ನಿರ್ಮಾಣವಾದ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿದೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
2012ರಲ್ಲಿ ವಾಜಪೇಯಿ ಬಡಾವಣೆ ನಿರ್ಮಾಣ ಮಾಡಿ 1802 ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಲಾಗಿತ್ತು. ಈ ಸಂದರ್ಭದಲ್ಲಿ ನಿಯಮಗಳನ್ನು ಮೀರಿ ನಿವೇಶನಗಳನ್ನು ಹಂಚಲಾಗಿದೆ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ವತಿಯಿಂದ ದೂರನ್ನು ಸಲ್ಲಿಸಲಾಗಿತ್ತು.
ಅಣ್ಣಾ ಹಜಾರೆ ಹೋರಾಟ ಸಮಿತಿ ಸುದ್ದಿಗೋಷ್ಠಿ ದೂರಿನನ್ವಯ ವರದಿ ನೀಡಿದ ಲೋಕಾಯುಕ್ತ ಸಂಸ್ಥೆ ಈ ಹಿಂದಿನ ಸೂಡಾ ಅಧ್ಯಕ್ಷರಾಗಿದ್ದ ದತ್ತಾತ್ರಿ ಮತ್ತು ಜ್ಞಾನೇಶ್ವರ್ ತಪ್ಪಿತಸ್ಥ ಎಂದು ಘೋಷಿಸಿ ಅವರಿಗೆ ಸರ್ಕಾರದ ಯಾವುದೇ ಹುದ್ದೆಗಳನ್ನು ಎರಡು ವರ್ಷಗಳ ಕಾಲ ನೀಡದಂತೆ ಆದೇಶಿಸಿತ್ತು.
ಆದರೆ, ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ದತ್ತಾತ್ರಿ ಅವರನ್ನ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಹಾಗಾಗಿ, ಸರ್ಕಾರ ನೀಡಿರುವ ಸ್ಥಾನ ಹಿಂಪಡೆಯಬೇಕು ಎಂದರು.
ಲೋಕಾಯುಕ್ತ ವರದಿಯ ಅನ್ವಯ 1305ರಲ್ಲಿ 807 ನಿವೇಶನಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂದು ತಿಳಿಸಲಾಗಿದೆ. ಉಳಿದ 498 ನಿವೇಶನ ಸಕ್ರಮವೆಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಆದರೆ, ವಾಜಪೇಯಿ ಬಡಾವಣೆಯಲ್ಲಿ ಹಂಚಿರುವ ಎಲ್ಲಾ ನಿವೇಶನಗಳು ಅಕ್ರಮದಿಂದ ಕೂಡಿದ್ದು, ಸರ್ಕಾರ ಮತ್ತೊಮ್ಮೆ ಪುನರ್ ಪರಿಶೀಲಿಸಿ ನಿವೇಶನಗಳನ್ನು ಕಾನೂನಿನ ರೀತಿ ಹಂಚಿಕೆ ಮಾಡಬೇಕು ಹಾಗೂ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಸದಸ್ಯರು ಒತ್ತಾಯಿಸಿದರು.