ಶಿವಮೊಗ್ಗ:ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದನ್ನು ಕಂಡು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಸಿಟ್ಟಾದ ಘಟನೆ ನಡೆಯಿತು.
ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸಭೆ ಪ್ರಭು ಚೌಹಾಣ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಶುಪಾಲನಾ ಇಲಾಖೆಯ ಕೆಡಿಪಿ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳ ಜೊತೆ ಹೊಸದಾಗಿ ಗೋ ಹತ್ಯೆ ನಿಷೇಧ ಕಾನೂನು ಹಾಗೂ ಶಿಕ್ಷೆಯ ಕುರಿತು ಮಾಹಿತಿ ಕೇಳಿದ್ದಾರೆ. ಆದ್ರೆ ಈ ವೇಳೆ, ತಾಲೂಕು ವೈದ್ಯಾಧಿಕಾರಿಗಳು ಸರಿಯಾದ ಉತ್ತರ ನೀಡಲಿಲ್ಲ.
ಉಪ ನಿರ್ದೇಶಕರಿಗೆ ಖಡಕ್ ವಾರ್ನಿಂಗ್:
ಜಿಲ್ಲೆಯ ಎಲ್ಲಾ ಉಪ ನಿರ್ದೇಶಕರಿಗೆ ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ತಿಳಿಸಬೇಕು ಎಂದು ತಿಳಿಸಿದ ಸಚಿವರು, ಕಾನೂನಿನ ಬಗ್ಗೆ ಮಾಹಿತಿ ನೀಡುವ ದಿನಾಂಕವನ್ನು ನಿರ್ದೇಶಕರಿಂದ ಪಡೆದುಕೊಂಡರು. ಇದೇ ವೇಳೆ, ಮಾಹಿತಿ ನೀಡುವ ಕಾರ್ಯಕ್ರಮದ ಫೋಟೊವನ್ನು ತನಗೆ ವಾಟ್ಸಾಪ್ ಮಾಡುವಂತೆಯೂ ಖಡಕ್ ಆಗಿ ತಿಳಿಸಿದರು.
ಬಳಿಕ ಕಾನೂನಿನಡಿ ಎಷ್ಟು ಎಫ್ಐಆರ್ ದಾಖಲಾಗಿವೆ ಎಂದು ಎಸ್ಪಿ ಬಳಿ ಕೇಳಿದಾಗ, ಅವರು 7 ಎಫ್ಐಆರ್ ದಾಖಲಾಗಿದೆ ಎಂದರು. ಇಂತಹ ದೂರುಗಳು ಬಂದಾಗ ತಕ್ಷಣ ಪಡೆದು ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
ಇದನ್ನೂಓದಿ: ಪ್ರಿಯತಮೆ ಪ್ರೀತಿ ಒಪ್ಪಲಿಲ್ಲ ಅಂತ ವಾಹನಗಳ ಪುಡಿಗಟ್ಟಿ ಭಗ್ನಪ್ರೇಮಿಯ ಪುಂಡಾಟಿಕೆ
ಉಪ ನಿರ್ದೇಶಕರು, ಪಶು ವೈದ್ಯರು ತಮ್ಮ ತಮ್ಮ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು. ಪಶು ವೈದ್ಯರು ತಮ್ಮ ಮೊಬೈಲ್ಗಳನ್ನು ಸ್ವಿಚ್‌ಆಫ್ ಮಾಡಬಾರದು. ಒಂದು ವೇಳೆ ಕೆಲಸ ಮಾಡಲು ಆಗಲ್ಲ ಅಂದ್ರೆ, ವರ್ಗಾವಣೆ ಮಾಡಿಕೊಂಡು ಹೋಗಲಿ, ಇಲ್ಲವೇ ಕೆಲಸವೇ ಬಿಟ್ಟು ಹೋಗಲಿ ಎಂದು ಎಚ್ಚರಿಕೆ ಕೊಟ್ಟರು.