ಶಿವಮೊಗ್ಗ:ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿಲ್ಲ. ನಿಯಮಾವಳಿ ಪ್ರಕಾರ ಪರವಾನಗಿ ಪಡೆದು ಗಣಿಗಾರಿಕೆ ಮತ್ತು ಖನಿಜ ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಕ್ವಾರಿ, ಕ್ರಷರ್ ಮತ್ತು ಮರಳು ಸಾಗಾಣಿಕಾ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಕ್ವಾರಿಗಳ ಸಮಗ್ರ ಸ್ಥಿತಿಗತಿ ಪರಿಶೀಲನೆಗೆ ಹಾಗೂ ಅಕ್ರಮ ಗಣಿಗಾರಿಕೆ ಪರಿಶೀಲಿಸಲು ಡ್ರೋನ್ ಮೂಲಕ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಪರವಾನಗಿ ಪಡೆದವರು ನಿಯಮಾವಳಿ ಉಲ್ಲಂಘಿಸದೇ ಗಣಿಗಾರಿಕೆ ಮತ್ತು ಸಾಗಣೆ ನಡೆಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಗಣಿಗಾರಿಕೆ ಮೇಲೆ ನಿಗಾ ವಹಿಸಬೇಕು. ಸ್ಥಳ ತಪಾಸಣೆ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿ ಸಹ ಉಪಸ್ಥಿತರಿರಬೇಕು ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ನಿರ್ವಹಣೆ
ಜನರಿಗೆ ಸುಲಭವಾಗಿ ಮರಳು ಸಿಗುವಂತೆ ಖಾತ್ರಿಪಡಿಸಲು ಸರ್ಕಾರ ಹೊಸ ಮರಳು ನೀತಿ ಜಾರಿಗೊಳಿಸಿದೆ. ಅದರ ಪ್ರಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಳ್ಳ ತೊರೆಗಳಲ್ಲಿ ಲಭ್ಯವಿರುವ ಮರಳನ್ನು ಗುರುತಿಸಿ ಸ್ಥಳೀಯವಾಗಿ ಅದನ್ನು ವಿಲೇವಾರಿ ಮಾಡಲು ಗ್ರಾಮ ಪಂಚಾಯ್ತಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದರು.
ತೀರ್ಥಹಳ್ಳಿ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಈಗಾಗಲೇ 24 ಕಡೆಗಳಲ್ಲಿ ಇಂತಹ ಮರಳು ಸಂಗ್ರಹವನ್ನು ಗುರುತಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು. ಜಿಲ್ಲಾ ಸಮಿತಿಯು ನಿಗದಿಪಡಿಸಿದ ಪ್ರಮಾಣದ ಮರಳನ್ನು ದೈಹಿಕ ಶ್ರಮದಿಂದ ಹೊರತೆಗೆದು ಟ್ರ್ಯಾಕ್ಟರ್, ಚಕ್ಕಡಿಯಂತಹ ಸಣ್ಣ ವಾಹನಗಳ ಮೂಲಕ ಸಾಗಿಸಲು ಮಾತ್ರ ಅವಕಾಶವಿದೆ. ಆಶ್ರಯ ಮನೆ ನಿರ್ಮಾಣ, ಸರ್ಕಾರಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸ್ಥಳೀಯವಾಗಿ ಮರಳು ನಿರ್ವಹಣೆಗೆ ಗ್ರಾಮ ಪಂಚಾಯ್ತಿ ಪಿಡಿಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ನೇರ ಹೊಣೆಯಾಗಿದ್ದು, ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ಈ ರೀತಿಯಲ್ಲಿ 2.56 ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಬೇರೆ ತಾಲೂಕುಗಳಲ್ಲಿ ಇಂತಹ ಮರಳು ಸಂಗ್ರಹ ಗುರುತಿಸುವ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಪ್ರಕರಣ ದಾಖಲು
ಪ್ರಸ್ತುತ ವರ್ಷ ಇದುವರೆಗೆ ಜಿಲ್ಲೆಯಲ್ಲಿ ನಾಲ್ಕು ಅಕ್ರಮ ಮರಳು ಸಾಗಣೆ ಮತ್ತು ದಾಸ್ತಾನು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅನಧಿಕೃತ ಮರಳುಗಾರಿಕೆಯ 33 ಪ್ರಕರಣಗಳಲ್ಲಿ 23.26 ಲಕ್ಷ ರೂ. ದಂಡ ವಿಧಿಸಲಾಗಿದೆ. 18 ಅನಧಿಕೃತ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅನಧಿಕೃತ ಕಲ್ಲು ಗಣಿಗಾರಿಕೆ ಹಾಗೂ ಸಾಗಣೆ 54 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 41 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಾಮ್ಜಿ ಅವರು ತಿಳಿಸಿದರು.