ಪ್ರಕರಣದ ಬಗ್ಗೆ ನಟಿ ಅನಿತಾ ಗೌಡ ಮಾತನಾಡಿರುವುದು ಶಿವಮೊಗ್ಗ: ಜಮೀನು ವಿವಾದ ತೀವ್ರಗೊಂಡು ಚಲನಚಿತ್ರ ಸಹ ನಟಿ ಅನಿತಾ ಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಟಿ ಅನಿತಾ ಗೌಡ ಅವರ ಮೇಲೆ ಸಾಗರ ತಾಲೂಕು ಕಾಸ್ಪಾಡಿ ಗ್ರಾಮದಲ್ಲಿ ಹಲ್ಲೆ ನಡೆಸಲಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿ ಅನಿತಾ ಗೌಡ ಅವರು ಮೂಲತಃ ಹೊಸನಗರದ ನಿವಾಸಿಯಾಗಿದ್ದು, ಇವರ ತಂದೆಗೆ ಸಂಬಂಧಪಟ್ಟಂತೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಜಮೀನು ಇದೆ. ಕಾಸ್ಪಾಡಿ ಗ್ರಾಮದ ಸರ್ವೇ ನಂಬರ್ 43ರಲ್ಲಿ ಜಮೀನು ಕುರಿತು ಅನಿತಾ ಗೌಡ ಅವರ ತಂದೆ ಶ್ರೀನಿವಾಸ ಗೌಡ ಅವರಿಗೂ ಅದೇ ಗ್ರಾಮದ ಮೋಹನ್ ಅವರಿಗೂ ವಿವಾದ ಇತ್ತು. ಇದೇ ವಿಚಾರವಾಗಿ ಕಳೆದ ಜೂ. 30ರಂದು ನಾನು ಹಾಗೂ ನನ್ನ ತಂದೆ ಶ್ರೀನಿವಾಸ ಗೌಡ ಅವರು ಜಮೀನಿನಲ್ಲಿ ಇದ್ದ ವೇಳೆ ಮೋಹನ್ ಹಾಗೂ ಅವರ ತಾಯಿ ನೀಲಮ್ಮ ಅವರು ಬಂದು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ನಟಿ ಅನಿತಾ ಗೌಡ ಆರೋಪಿಸಿದ್ದಾರೆ.
ತಲೆಗೂ ಸಹ ಹೊಡೆದಿದ್ದಾರೆ. ಇದರಿಂದ ಗಾಯಗೊಂಡ ಅನಿತಾ ಗೌಡ ಅವರು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ತಮ್ಮ ಮೇಲೆ ಮೋಹನ್ ಹಾಗೂ ನೀಲಮ್ಮ ಅವರು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಜನ್ಮದಿನದ ಸಂಭ್ರಮದಲ್ಲಿ ಕೋಮಲ್: ವಜ್ರಮುನಿ ಗೆಟಪ್ನಲ್ಲಿ ಬಂದ ನಟ - ಯಲಾಕುನ್ನಿ ಫಸ್ಟ್ ಲುಕ್ ಅನಾವರಣ
ಈ ಬಗ್ಗೆ ಸ್ವತಃ ನಟಿ ಅನಿತಾ ಗೌಡ ಮಾತನಾಡಿ, ''ಈ ಪ್ರಕರಣ ನಡೆದಿದ್ದು ಜೂ. 30ರಂದು. ನಮ್ಮದೇ ಜಾಗದಲ್ಲಿ ಗಲಾಟೆ ನಡೆಯಿತು. ನಮ್ಮ ಜಾಗದ ದಾಖಲೆ ಎಲ್ಲವೂ ಸರಿ ಇದೆ. ನಮ್ಮದೇ ಹೆಸರಿನಲ್ಲಿದೆ. ಅಡಿಕೆ ತೋಟ ಮಾಡಲು ಸಿದ್ಧತೆ ನಡೆಸುತ್ತಿದ್ದೆವು. ಕೆಲಸ ಮುಗಿಸಿ ಹೊರಡಬೇಕೆನ್ನುವಷ್ಟರಲ್ಲಿ, ಮೋಹನ್ ಅವರು ಬಂದು ಹಲ್ಲೆ ನಡೆಸಿದರು. ಕೆಟ್ಟ ಪದಗಳ ಬಳಕೆ ಮಾಡಿದರು. ಅವರ ತಾಯಿ ಕೂಡ ಹಲ್ಲೆ ಮಾಡಿ ಮುಖಕ್ಕೆ ಮಣ್ಣೆರೆಚಿದರು. ಇಬ್ಬರೂ ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ನನ್ನ ತಂದೆ ಮೇಲೂ ಹಲ್ಲೆ ನಡೆಸಿದರು. ಬಳಿಕ ಆಸ್ಪತ್ರೆಗೆ ಬಂದು ದಾಖಲಾದೆ. ಈ ಮೊದಲೂ ಕೂಡ ನಮಗೆ ಸಮಸ್ಯೆ ಸೃಷ್ಟಿ ಮಾಡಿದ್ದರು. ನಾವಿಲ್ಲದ ಸಂದರ್ಭ ಬಂದು ಜಮೀನನ್ನು ಹಾಳು ಮಾಡಿದ್ದರು. ಈ ಸಂಬಂಧ ಈಗಾಗಲೇ ಎಫ್ಐಆರ್ ಒಂದು ದಾಖಲಾಗಿದ್ದು, ಆ ಪ್ರಕರಣ ಕೂಡ ನಡೆಯುತ್ತಿದೆ. ಇದೀಗ ಈ ರೀತಿ ನಡೆದುಕೊಂಡಿದ್ದಾರೆ'' ಎಂದು ಆರೋಪಿಸಿದರು.