ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನುದಾನ ನೀಡುವಲ್ಲಿ ಪಕ್ಷಪಾತ ನಡೆಸುತ್ತಿದ್ದಾರೆ ಎಂದು ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ. ನಾವು ಯಾವುದೇ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದಿರುವುದಿಲ್ಲ. ಆದರೆ ನೀವು ನಿಮ್ಮ ಪಕ್ಷಕ್ಕೆ ಬೆಂಬಲಿಸುವ ಸದಸ್ಯರಿಗೆ ಮಾತ್ರ ಅನುದಾನ ನೀಡಿದ್ರೆ ಹೇಗೆ? ಅಂತ ಪ್ರಶ್ನಿಸಿದ್ದಾರೆ.
ಅನುದಾನ ಹಂಚಿಕೆಯಲ್ಲಿ ತಾರತಮ್ಯ ? ಆರೋಪ ಹೀಗಿದೆ.. ಗ್ರಾಮ ಪಂಚಾಯಿತಿಯಲ್ಲಿ 13 ಸದಸ್ಯರಿದ್ದಾರೆ. ಇವರಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡದೇ ತಮ್ಮ ಪಕ್ಷದವರಿಗೆ ಮಾತ್ರ ಅನುದಾನ ನೀಡಿದ್ರೆ, ನಮ್ಮ ವಾರ್ಡ್ ಅಭಿವೃದ್ಧಿ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಜನ ಸೇವೆ ಮಾಡಲೆಂದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದೇವೆ. ರಾಜ್ಯ ಸರ್ಕಾರದಿಂದ ಬರುವ ಹಣದಲ್ಲಿಯೇ ನಾವು ಗ್ರಾಮ ಪಂಚಾಯಿತಿಯ ನಿರ್ವಹಣೆ, ವಿದ್ಯುತ್ ಬಿಲ್ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಳ್ಳಬೇಕು.
ಉಳಿದ ಐದಾರು ಲಕ್ಷ ರೂ.ನಲ್ಲಿ ಅಭಿವೃದ್ಧಿ ನಡೆಸಲು ಆಗುವುದಿಲ್ಲ. ಈ ಹಣವನ್ನು ಗ್ರಾಮ ಪಂಚಾಯಿತಿ ಸದಸ್ಯರು ಹಂಚಿಕೊಂಡರೆ ಒಬ್ಬ ಸದಸ್ಯನಿಗೆ 50 ಸಾವಿರ ರೂ. ಬರುತ್ತದೆ. ಇದರಲ್ಲಿ ನಾವು ನಮ್ಮ ವಾರ್ಡ್ ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂದು ಸದಸ್ಯ ಪರಮೇಶ್ ನಾಯ್ಕ ಅವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಜನರಿಗೆ ಮೂಲ ಸೌಕರ್ಯ ಸಿಗದ ವೇಳೆ ಅವರ ಬಳಿ ಬಾಯಿಗೆ ಬಂದ ಹಾಗೆ ಬೈಯಿಸಿಕೊಳ್ಳಬೇಕೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯನವ್ರು ಬಿಜೆಪಿಗೆ ಮಾತ್ರ ಹೋಗಬೇಡ ಎಂದಿದ್ದರು - ಜಿ.ಟಿ. ದೇವೇಗೌಡ
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಯಾವುದೇ ವಾರ್ಡ್ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಅನುದಾನದ ಅವಶ್ಯಕತೆ ಇರುತ್ತದೆ. ಆದರೆ ಶಾಸಕರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಸಬಾರದು. ಹೀಗೆ ತಾರತಮ್ಯ ನಡೆಸಿದ್ರೆ ವಾರ್ಡ್, ಹೋಬಳಿ ಹೇಗೆ ಅಭಿವೃದ್ಧಿಯಾಗುತ್ತದೆ ಎಂದು ಗ್ರಾಮಸ್ಥ ಗೇಮ್ಯ ನಾಯ್ಕ ಪ್ರಶ್ನೆ ಮಾಡಿದ್ದಾರೆ.