ಶಿವಮೊಗ್ಗ: ಉದ್ಯಾನವನಗಳು ಆಯಾ ನಗರದ ಶ್ವಾಸಕೋಶವಿದ್ದಂತೆ. ಪ್ರತಿ ಉದ್ಯಾನವನಗಳು ಆಯಾ ನಗರದ ನಾಗರಿಕರ ಆರೋಗ್ಯವನ್ನು ಸೂಚಿಸುತ್ತದೆ. ಇಂತಹ ಪ್ರಮುಖ ನಿವೇಶನಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಹಂತ, ಹಂತವಾಗಿ ಉದ್ಯಾನವನದ ಜಾಗವನ್ನು ಒತ್ತುವರಿ ಮಾಡಲಾಗುತ್ತಿದೆ. ಈ ಕುರಿತು ಸ್ಥಳೀಯರು ದೂರು ನೀಡಿದರು, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ 425 ಪಾರ್ಕ್ಗಳಿವೆ. ಇದರಲ್ಲಿ ಶೇ. 70 ರಷ್ಟು ಹಳೆಯ ಪಾರ್ಕ್ಗಳಾಗಿವೆ. ಉಳಿದ ಶೇ.30ರಷ್ಟು ಪಾರ್ಕ್ಗಳು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆಗೆ ಸೇರ್ಪಡೆಯಾಗಿವೆ. ಹೀಗೆ ಸೇರ್ಪಡೆಯಾದ ಪಾರ್ಕ್ ಸೇರಿದಂತೆ ರಸ್ತೆ, ಮೂಲಭೂತ ಸೌಕರ್ಯದ ಕುರಿತು ಶಿವಮೊಗ್ಗ - ಭದ್ರಾವತಿ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಹಸ್ತಾಂತರ ಮಾಡಬೇಕಿದೆ. ಆದರೆ, ಸಂಪೂರ್ಣ ಅಭಿವೃದ್ಧಿಪಡಿಸದೇ ಹಾಗೆಯೇ ಹಸ್ತಾಂತರ ಮಾಡುವುದರಿಂದ ಮಹಾನಗರ ಪಾಲಿಕಿಗೆ ಒತ್ತುವರಿಯ ಬಗ್ಗೆ ತಿಳಿಯುವುದೆ ಇಲ್ಲ ಎಂಬುದು ಜನರ ಆರೋಪವಾಗಿದೆ.
ಶಿವಮೊಗ್ಗದ ಕಾಶಿಪುರದ ಹನುಮಂತಪ್ಪ ಬಡಾವಣೆ ಪಾರ್ಕ್ ಹಾಗೂ ಕನಕ ಬಡಾವಣೆಯ ಪಾರ್ಕ್ ಹೀಗೆ ಒತ್ತುವರಿಯಾಗಿವೆ. ಈ ಕುರಿತು ಪಾಲಿಕೆಯ ಆಯುಕ್ತರಿಗೆ ಹಾಗೂ ಮೇಯರ್ಗಳಿಗೆ ದೂರು ನೀಡಲಾಗಿದೆ. ಪ್ರಭಾವಿಗಳ ಒತ್ತಡದಿಂದ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಸ್ಥಳೀಯ ಹೋರಾಟಗಾರರ ಆರೋಪಾಗಿದೆ.
ಪಾರ್ಕ್ ಒತ್ತುವರಿ ಮಾಡಿಕೊಂಡ ಭೂಗಳ್ಳರ ವಿರುದ್ಧ ಸಾರ್ವಜನಿಕರ ಆಕ್ರೋಶ ಆದರೆ, ಒತ್ತುವರಿ ಬಗ್ಗೆ ಕೇಳಿದರೆ, ನಮಗೆ ಪಾರ್ಕ್ ಒತ್ತುವರಿ ಬಗ್ಗೆ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ. ಅಲ್ಲದೆ ತಮ್ಮ ಬಡಾವಣೆಯ ಪಾರ್ಕ್ಗಳ ಬಗ್ಗೆ ಸ್ಥಳೀಯರು ಹೆಚ್ಚಿನ ಗಮನವಹಿಸಿ, ಒತ್ತುವರಿ ಮಾಡಿಕೊಂಡರೆ, ಅದನ್ನು ಪಾಲಿಕೆಗೆ ತಿಳಿಸಬೇಕು ಎನ್ನುತ್ತಾರೆ ಮೇಯರ್ ಸುವರ್ಣ ಶಂಕರ್.