ಶಿವಮೊಗ್ಗ: ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡ ಆರ್. ಎಂ. ಮಂಜುನಾಥ್ ಗೌಡರ ಬೆಂಬಲಿಗರು ನನ್ನನ್ನು ಅಪಹರಣ ಮಾಡಿದ್ದರು. ನಂತರ ಕಿಮ್ಮನೆ ರತ್ನಾಕರ್ ಹಾಗೂ ಅರಣ್ಯ ಇಲಾಖೆಯವರ ವಿರುದ್ಧ ಸುಳ್ಳು ಹೇಳಿಕೆಯ ವಿಡಿಯೋವನ್ನು ಸೆರೆಹಿಡಿದು ವೈರಲ್ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಮಂಜುನಾಥ ಆರೋಪಿಸಿದ್ದಾರೆ.
ಇಂದು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರೈತರ ಮೇಲೆ ಅರಣ್ಯ ಇಲಾಖೆಯವರ ದೌರ್ಜನ್ಯ, ಕಿರುಕುಳದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ದ್ವನಿ ಎತ್ತಿದ್ದರು. ನಂತರ ಅಕ್ಟೋಬರ್ 2 ರಂದು ಕೊಪ್ಪಸರ ನಿವಾಸಿ ಮಂಜುನಾಥ ಅವರ ಮನೆಯಿಂದ ಪಾದಯಾತ್ರೆ ನಡೆಸಿದರು. ಆದರೆ, ಪಾದಯಾತ್ರೆ ಹಿಂದಿನ ದಿನ ಕೊಪ್ಪಸರ ನಿವಾಸಿ ಮಂಜುನಾಥ ಅವರು ಕಿಮ್ಮನೆ ರತ್ನಾಕರ್ ಅವರು ನನಗೆ ತಿಳಿಯದೆ ಪಾದಯಾತ್ರೆ ಮಾಡುತ್ತಿದ್ದಾರೆ ಹಾಗೂ ಅರಣ್ಯ ಇಲಾಖೆಯವರು ನನಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಹೇಳಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.
ಈ ವಿಚಾರವಾಗಿ ಮಾತನಾಡಿದ ಮಂಜುನಾಥ, ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆ ಮಾಡುವ ಹಿಂದಿನ ದಿನ ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡ ಮಂಜುನಾಥ ಗೌಡರ ಬೆಂಬಲಿಗರು ನನ್ನನ್ನು ಅಪಹರಣ ಮಾಡಿದ್ದರು. ನಂತರ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಒಪ್ಪದೆ ಹೋದರೆ ಕುಟುಂಬಕ್ಕೆ ತೊಂದರೆ ಮಾಡುವುದಾಗಿ ಹೆದರಿಸಿ ನನ್ನಿಂದ ವಿಡಿಯೋ ಮಾಡಿಸಿಕೊಂಡು ಅದನ್ನು ವೈರಲ್ ಮಾಡಿದ್ದಾರೆ ಎಂದು ದೂರಿದರು.