ಶಿವಮೊಗ್ಗ: ವಿಧಾನಸಭಾ ಚುನಾವಣೆ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಆರ್ ತಿಳಿಸಿದ್ದಾರೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7,28,886 ಪುರುಷ, 7,43,713 ಮಹಿಳಾ, 32 ಇತರ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 14,73,327 ಮತದಾರರಿದ್ದಾರೆ.
ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಮತಗಟ್ಟೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 1775 + 7 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2,050 ಪಿಆರ್ಒ, 2,050 ಎಪಿಆರ್ಓ, 4,100 ಪಿಒ ಸೇರಿದಂತೆ ಒಟ್ಟು 8,200 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗೂ 83 ಮೈಕ್ರೋ ಅಬ್ಸರ್ವರ್ಗಳನ್ನು ನೇಮಕ ಮಾಡಲಾಗಿದೆ.
ಒಟ್ಟು 8,156 ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್ಗಳನ್ನು ನಿಯೋಜಿಸಲಾಗಿದೆ.
ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳಗಳನ್ನು ಗುರುತಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್, ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮತ್ತು ಎಸ್.ಆರ್. ನಾಗಪ್ಪಶೆಟ್ರಿ ಸ್ಮರಕ ರಾಷ್ಟ್ರೀಯ ಅನ್ವಯಿಕ ಸೈನ್ಸ್ ಪಿಯು ಕಾಲೇಜಿನಲ್ಲಿ ನಡೆಯಿತು. ಭದ್ರಾವತಿ ಕ್ಷೇತ್ರದ್ದು, ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜಿನಲ್ಲಿ, ಶಿವಮೊಗ್ಗ ಕ್ಷೇತ್ರದ್ದು, ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ, ತೀರ್ಥಹಳ್ಳಿ ಕ್ಷೇತ್ರದ್ದು, ಡಾ.ಯು.ಆರ್ ಅನಂತಮೂರ್ತಿ ಕಾಲೇಜಿನಲ್ಲಿ, ಶಿಕಾರಿಪುರ ಕ್ಷೇತ್ರದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಸೊರಬ ಕ್ಷೇತ್ರದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಸಾಗರ ಕ್ಷೇತ್ರದ್ದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ ಸೆಲ್ವಮಣಿ ತಿಳಿಸಿದ್ದಾರೆ.