ಶಿವಮೊಗ್ಗ :ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೇ 13ರಂದು ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ತಿಳಿಸಿದ್ದಾರೆ. ಅಂಚೆ ಮತ ಎಣಿಕೆಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರವಾರು ಹೆಚ್ಚುವರಿಯಾಗಿ 6 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರು ಶನಿವಾರ ಬೆಳಿಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಲು ಸೂಚನೆ ನೀಡಲಾಗಿದೆ. ಬೆಳಿಗ್ಗೆ 7ಗಂಟೆಗೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳು ಮತ್ತು ಸಹಾಯಕ ಚುನಾವಣಾಧಿಕಾರಿಯ ಟ್ಯಾಬುಲೇಷನ್ ಟೇಬಲ್ ಇರುತ್ತದೆ. ಮತ ಎಣಿಕೆ ಸ್ಥಳದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರಿಗೆ ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಂಚೆ ಮತಪತ್ರಗಳ ಎಣಿಕೆ ಮತ್ತು ಕಂಟ್ರೋಲ್ ಯುನಿಟ್ ಮೂಲಕ ಮತ ಎಣಿಕೆಯನ್ನು ಬೆಳಿಗ್ಗೆ 8 ಗಂಟೆಗೆ ಆರಂಭಿಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ತರಬೇತಿ ನೀಡಲಾಗಿದೆ. ಇವಿಎಂ ಮತ ಎಣಿಕೆ ಪೂರ್ಣಗೊಂಡ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಿ ಎಣಿಕೆ ಮಾಡಲಾಗುವುದು. ಮತ ಎಣಿಕೆ ಹಾಲ್‌ನಲ್ಲಿ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿರ್ಬಂಧಿಸಲಾಗಿದ್ದು, ಮತ ಎಣಿಕೆ ಆವರಣದ ಸುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾಹಿತಿ ನೀಡಿದರು.