ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿ ಇನ್ನುಷ್ಟು ಚುರುಕುಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಆಗಬೇಕು ಎಂಬ ಆಸೆ ಜಿಲ್ಲೆಯ ಜನತೆಯದ್ದಾಗಿದೆ. ಯಡಿಯೂರಪ್ಪನವರು ಸಿಎಂ ಆದ ನಂತರ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸಿದ್ದಾರೆ ಎಂದರು. ವಿಮಾನ ನಿಲ್ದಾಣದ ಕಾಮಗಾರಿಯು ಫೇಸ್ - 1ರಲ್ಲಿ ರನ್ ವೇ, ಪ್ಯಾಡ್ ಕಾಮಗಾರಿ ನಡೆಯುತ್ತಿದೆ. ಈ ಫೇಸ್-1 ಕಾಮಗಾರಿಗೆ 149 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಫೇಸ್ - 2ರಲ್ಲಿ ಬಿಲ್ಡಿಂಗ್ ಪ್ಲಾನ್ ಇದೆ. ಈಗ ಟೆಂಡರ್ ಮುಗಿದಿದೆ. ನಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಹಂತದ ಕಾಮಗಾರಿಗೆ 220 ಕೋಟಿ ರೂ. ಬಿಡುಗಡೆಯಾಗಿದೆ. 2021ರ ಅಂತ್ಯಕ್ಕೆ ವಿಮಾನ ಹಾರಾಟ ನಡೆಸಬಹುದಾಗಿದೆ. ಆದರೆ ಕಾಮಗಾರಿಯ ವೇಗ ಇನ್ನಷ್ಟು ಹೆಚ್ಚಾಗಬೇಕಿದೆ ಎಂದರು.