ಶಿವಮೊಗ್ಗ : "ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು" ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಂಡ್ಯದ ಕೃಷಿ ಅಧಿಕಾರಿಗಳು ನೇರವಾಗಿ ಚಲುವರಾಯ ಸ್ವಾಮಿ ವಿರುದ್ದ ದೂರು ನೀಡಿದ್ದಾರೆ. ಅಧಿಕಾರಿಗಳೇ ನೇರವಾಗಿ ಸಚಿವರೊಬ್ಬರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು. ಕೃಷಿ ಅಧಿಕಾರಿಗಳ ದೂರಿನಲ್ಲಿ ಯಾರು, ಯಾರಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದರು.
ಸಚಿವರ ವಿರುದ್ಧದ ಆರೋಪವೇನು? : ಕೃಷಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಸಚಿವರು 6- 8 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಏಳು ಮಂದಿ ಸಹಾಯಕ ಕೃಷಿ ಅಧಿಕಾರಿಗಳು ಆರೋಪಿಸಿ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ರಾಜ್ಯಪಾಲರಿಗೆ ಬರೆದ ಪತ್ರದ ವಿವರ:ಮಂಡ್ಯ, ಕೆ.ಆರ್.ಪೇಟೆ, ಮಳವಳ್ಳಿ, ನಾಗಮಂಗಲ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವಪುರದ ಕೃಷಿ ಸಹಾಯಕ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉಲ್ಲೇಖಿಸಿದ್ದಾರೆ. ಸಚಿವರ ವಿರುದ್ಧ ದೂರು ಬಂದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ರಾಜ್ಯಪಾಲರು ಪತ್ರ ಬರೆದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ: "ಈ ಬಗ್ಗೆ ನನಗೆ ಯಾವ ಮಾಹಿತಿಯೂ ಗೊತ್ತಿಲ್ಲ. ತನಿಖೆಗೆ ನೀಡುವಂತೆ ಮುಖ್ಯಮಂತ್ರಿಗಳ ಬಳಿ ನಾನೂ ಕೂಡ ಕೇಳಿಕೊಂಡಿದ್ದೇನೆ" ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. "ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರನ್ನು ಕರೆದು ಸ್ವತಃ ನಾನೇ ಮಾತನಾಡಿದ್ದೇನೆ. ಪ್ರಾಥಮಿಕವಾಗಿ ತನಿಖೆ ಮಾಡುವಂತೆಯೂ ಹೇಳಿದ್ದೇನೆ. ಮುಖ್ಯಮಂತ್ರಿಗಳು ಕೂಡ ತಮ್ಮಲ್ಲಿರುವ ಅಧಿಕಾರ ಉಪಯೋಗಿಸಿ ಯಾವುದಾರೂ ತನಿಖೆಗೊಳಿಸುವಂತೆ ಹಾಗೂ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆಯೂ ಫೋನ್ ಕರೆ ಮೂಲಕ ಮನವಿ ಮಾಡಿದ್ದೇನೆ" ಎಂದು ಸಚಿವರು ತಿಳಿಸಿದ್ದಾರೆ.
'ವಿನಾಕಾರಣ ನನ್ನ ತೇಜೋವಧೆ': "ಜಿಲ್ಲೆಯಲ್ಲಿ ಯಾವುದೇ ಎಡಿ, ಜೆಡಿ ಹಾಗೂ ಇಡಿ ಅಧಿಕಾರಿಗಳ ಬಳಿ ಈ ವಿಷಯವನ್ನು ಪ್ರಸ್ತಾಪ ಮಾಡಿಲ್ಲ, ಚರ್ಚೆಯನ್ನೂ ಮಾಡಿಲ್ಲ. ನನ್ನ ಹೆಸರನ್ನು ಬಳಸಿ ನೀವು ಯಾರಾದರೂ ಈ ಬಗ್ಗೆ ಮಾತನಾಡಿದ್ದೀರಾ? ಎಂದು ಸಹ ಅಧಿಕಾರಿಗಳನ್ನು ಕೇಳಿದ್ದೇನೆ. ಅವರು ಸಹ ಯಾರ ಜೊತೆಗೂ ಮಾತನಾಡಿಲ್ಲ ಎಂದಿದ್ದಾರೆ. ವಿನಾಕಾರಣ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಎಸ್ಪಿ ಅವರ ಬಳಿ ಚರ್ಚೆ ಮಾಡಿದಾಗ ಇದೊಂದು ಫೇಕ್ (ನಕಲಿ) ಪತ್ರವೆಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದನ್ನು ಬರೆದವರು ಯಾರು ಅನ್ನೋದನ್ನು ಮೊದಲು ಪತ್ತೆ ಹಚ್ಚಬೇಕಿದೆ. ಮುಖ್ಯಮಂತ್ರಿಗಳು ಕೂಡ ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಹಾಗಾಗಿ, ತನಿಖೆ ಮಾಡಿ ಅಂತ ಅವರ ಬಳಿ ಕೇಳಿಕೊಂಡಿದ್ದೇನೆ" ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:ಅಸಮಾಧಾನಿತ 30ಕ್ಕೂ ಹೆಚ್ಚು ಶಾಸಕರಿಂದ ಸಿಎಂಗೆ ಪತ್ರ, ನಕಲಿ ಆಗಿರಲು ಸಾಧ್ಯವೇ ಇಲ್ಲ: ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ