ಶಿವಮೊಗ್ಗ :ವಿದ್ಯೆ ಕಲಿಸಿದ ಗುರುಗಳು ಮುಂದೊಂದು ದಿನ ನಮ್ಮನ್ನು ಕಂಡು ಹೆಮ್ಮೆ ಪಡುವಂತಹ ಪ್ರಜೆಗಳಾಗಿ ಸಮಾಜದಲ್ಲಿ ಬಾಳಬೇಕು. ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ನಟ ಪ್ರಥಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜೆಎನ್ಎನ್ಸಿಇ ಕಾಲೇಜಿನಲ್ಲಿ ಎಂಬಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಉತ್ಥಾನ -2021 ಕಾರ್ಯಕ್ರಮಕ್ಕೆ ನಟ ಪ್ರಥಮ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಿಡಬಾರದು. ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಿ, ಆ ಪ್ರಕಾರ ಕೆಲಸ ಮಾಡಿ, ಇದರಿಂದ ಯಶಸ್ಸು ಸಾಧ್ಯವಾಗುತ್ತದೆ ಎನ್ನುವುದಕ್ಕೆ ತಮ್ಮದೇ ಉದಾಹರಣೆ ಕೊಟ್ಟರು.
ತಾನು ಸಮಾಜದಿಂದ ಬಹಳಷ್ಟು ಪಡೆದಿದ್ದೇನೆ. ಅದಕ್ಕಾಗಿ ಈಗ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಕೋವಿಡ್ ಕಾಲದಲ್ಲಿ ಸುಮಾರು 5 ಸಾವಿರ ಆಹಾರದ ಕಿಟ್ ವಿತರಿಸಿದ್ದೇನೆ. ನನ್ನ ಪ್ರತಿ ಸಾರ್ವಜನಿಕ ಕಾರ್ಯಕ್ರಮದ ಹಣವನ್ನು ಮಂಗಳೂರಿನಲ್ಲಿ ನಡೆಯುತ್ತಿರುವ ಏಡ್ಸ್ ಪೀಡಿತರ ಚಿಕಿತ್ಸಾ ಸಂಸ್ಥೆಯೊಂದಕ್ಕೆ ನೀಡುತ್ತಿದ್ದೇನೆ ಎಂದರು.