ಶಿವಮೊಗ್ಗ: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ದರ್ಶನಕ್ಕಾಗಿ ಹಗಲಿರುಳು ಪರಿತಪಿಸುತ್ತಿದ್ದ ಮಲೆನಾಡಿನ ಯುವಕ ಸುದೀಪ್ ಎಂಬುವವರಿಗೆ ನಟ ದರ್ಶನ್ ದರ್ಶನ ಭಾಗ್ಯ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಬಳಿ ಮತ್ತಿಕೊಪ್ಪದ ನಿವಾಸಿ ಸುದೀಪ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟ್ಟಾ ಅಭಿಮಾನಿ. ಸುದೀಪ್ ಸಣ್ಣ ವಯಸ್ಸಿನಿಂದಲೇ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಮಾನಿಯಾಗಿದ್ದಾರೆ. ಇವರು ಸಣ್ಣ ವಯಸ್ಸಿನಲ್ಲಿಯೇ ದರ್ಶನ್ ಅವರನ್ನು ನೋಡಬೇಕು ಎಂಬ ಹಂಬಲವನ್ನು ಹೊಂದಿದ್ದರು.
ತಮ್ಮ ನೆಚ್ಚಿನ ನಟನನ್ನು ನೋಡಲು ಬೆಂಗಳೂರಿನ ಮನೆಗೆ ಹೋದರೂ ಸಹ ಅವರಿಗೆ ದರ್ಶನ್ ದರ್ಶನ ಭಾಗ್ಯ ಲಭ್ಯವಾಗಿರಲಿಲ್ಲ. ಇದರಿಂದ ಸುದೀಪ್ ಬೇಸರ ಮಾಡಿಕೊಂಡಿದ್ದರು. ಮನೆಯಲ್ಲಿ ಯಾವುದೇ ಕೆಲಸ ಮಾಡದೇ, ಒಬ್ಬಂಟಿಯಂತೆ ಕುಳಿತುಕೊಳ್ಳುತ್ತಿದ್ದರು. ಸುದೀಪ್ ವರ್ತನೆ ಕಂಡು ಮನೆಯವರು ತೀವ್ರವಾಗಿ ತಲೆಕೆಡಿಸಿಕೊಂಡಿದ್ದರು. ಸುದೀಪ್ಗೆ ದರ್ಶನ್ ಅವರನ್ನು ಭೇಟಿ ಮಾಡಿಸಬೇಕೆಂಬ ಆಸೆಯನ್ನು ಕುಟುಂಬಸ್ಥರು ಮಾಧ್ಯಮದವರ ಮುಂದೆ ಹೊರ ಹಾಕಿದ್ದರು. ಈ ಸುದ್ದಿಯನ್ನು ನಮ್ಮ ಈಟಿವಿ ಭಾರತದಲ್ಲಿಯೂ ಪ್ರಕಟಿಸಲಾಗಿತ್ತು.
ವರದಿ ಪ್ರಕಟಗೊಂಡ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ನೆಚ್ಚಿನ ಅಭಿಮಾನಿ ಸುದೀಪ್ ಅವರನ್ನು ಮೈಸೂರಿಗೆ ಕರೆಸಿಕೊಂಡು ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಸುದೀಪ್ ಅವರಿಗೆ ಧೈರ್ಯ ತುಂಬಿ, ತಮ್ಮ ಕೆಲಸ ಕಾರ್ಯದಲ್ಲಿ ತೂಡಗಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಭಿಮಾನಿಯನ್ನು ಭೇಟಿ ಮಾಡಿ ಕೈ ಕುಲುಕಿ, ಫೋಟೋ ಕ್ಲಿಕ್ಕಿಸಿಕೊಂಡು, ಉತ್ತಮವಾಗಿ ದುಡಿಮೆ ಮಾಡಿ ಕುಟುಂಬದವರನ್ನು ಸಾಕಿ, ಒಳ್ಳೆಯ ಜೀವನ ನಡೆಸಿ ಎಂದು ಸಲಹೆ ನೀಡಿದ್ದಾರೆ. ನನ್ನನ್ನು ನೋಡಲು ಪದೇ ಪದೆ ಬೆಂಗಳೂರಿಗೆ ಬರಬಾರದು ಎಂಬ ಬುದ್ಧಿ ಮಾತನ್ನೂ ಹೇಳಿ ಕಳುಹಿಸಿದ್ದಾರೆ.