ಶಿವಮೊಗ್ಗ: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮರಳು ಕ್ವಾರಿಗಳನ್ನು ಸ್ಥಗಿತಗೊಳಿಸಲು ಹಾಗೂ ಸ್ಥಗಿತಗೊಳಿಸಿರುವ ಕ್ವಾರಿಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚಿಸಿದ್ದಾರೆ.
ಅನಧಿಕೃತ ಮರಳು ಕ್ವಾರಿಗಳ ನಿಯಂತ್ರಣಕ್ಕೆ ಕ್ರಮ : ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಆದೇಶ - ಶಿವಮೊಗ್ಗದಲ್ಲಿ ಅಕ್ರಮ ಮರಳುಗಾರಿಕೆ
ಅನಧಿಕೃತವಾಗಿ ಕ್ವಾರಿಗಳನ್ನು ನಡೆಸುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅನೇಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.
ಡಿ.ಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣಿಗಾರಿಕೆ ಉಸ್ತುವಾರಿ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಂದೇ ಪರವಾನಗಿ ಹೊಂದಿ ಅನೇಕ ಲಾರಿ ಮೂಲಕ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ. ಈ ಸಂಬಂಧ ಸಕ್ಷಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ,ಯಂತ್ರ, ವಿತರಿಸಲಾದ ಲಾರಿಗಳು, ಮತ್ತಿತರ ದಾಖಲಾತಿಗಳನ್ನು ಪರಿಶೀಲಿಸುವಂತೆ ಹಾಗೂ ನಿಯಮ ಉಲ್ಲಂಘಿಸಿದಲ್ಲಿ ಮೊಕದ್ದಮೆ ದಾಖಲಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ ಕ್ರಷರ್ಗಳನ್ನು ಆರಂಭಿಸಲು ಅನುಮತಿ ನೀಡಿದ್ದು, ಅವಧಿ ಮುಕ್ತಾಯವಾಗಿರುವ ಕ್ರಷರ್ಗಳ ಪರವಾನಗಿದಾರರು ಪರವಾನಗಿಯನ್ನು ನವೀಕರಿಸಿಕೊಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಈ ಪರವಾನಗಿಯನ್ನು ನವೀಕರಿಸುವ ಮೊದಲು ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಸೂಚಿಸಿದರು.