ಶಿವಮೊಗ್ಗ:ಸರ್ಕಾರಿ ಶಾಲೆಗಳ ಆಸ್ತಿ-ಪಾಸ್ತಿಗಳನ್ನು ಆಯಾ ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕೆ. ಸುರೇಶ್ ಕುಮಾರ್ ಹೇಳಿದ್ರು.
ಶಾಲೆಗಳ ಆಸ್ತಿ ಆಯಾ ಶಾಲೆಗಳ ಹೆಸರಿಗೇ ನೋಂದಣಿ: ಸಚಿವ ಸುರೇಶ್ ಕುಮಾರ್ - ಶಿವಮೊಗ್ಗ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ
ಸರ್ಕಾರಿ ಶಾಲೆಗಳ ಆಸ್ತಿಪಾಸ್ತಿಗಳನ್ನು ಸಂಬಂಧಿಸಿದ ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕೆ. ಸುರೇಶ್ ಕುಮಾರ್ ತಿಳಿಸಿದರು.
ಸಾಗರ ತಾಲೂಕಿನ ಚದರವಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಶಾಲೆಗಳ ಆಕರ್ಷಣೆ ಕಡಿಮೆ ಮಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಹ ವಾತಾವರಣ ಸೃಷ್ಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಾಲೆಗಳ ದುರಸ್ತಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 530 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ 34.48 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಸಾಗರ ತಾಲೂಕಿನಲ್ಲಿ 134 ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಅಗತ್ಯ ಬಿದ್ದರೆ ಜಿಲ್ಲೆಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದರು.
ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಸೆಪ್ಟಂಬರ್ ನಿಂದ ನವೆಂಬರ್ ಒಳಗಾಗಿ ಆಯೋಜಿಸಲು ಸೂಚನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ರಾಘವೇಂದ್ರ ಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.