ಶಿವಮೊಗ್ಗ: ಕಳೆದ ಜುಲೈ 14ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಕುಖ್ಯಾತ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರವಾಗಿ ಕೊಲೆಯಾಗಿದ್ದ. ಈ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹಂದಿ ಅಣ್ಣಿ ಹಾಗೂ ಕಾಡಾ ಕಾರ್ತಿಕ್ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.
ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ಬರುತ್ತಿದ್ದ ಹಂದಿ ಅಣ್ಣಿಯನ್ನು ಕಾರ್ನಲ್ಲಿ ಹಿಂಬಾಲಿಸಿ ಬಂದಿದ್ದ 8 ಮಂದಿ ದುಷ್ಕರ್ಮಿಗಳು, ಪೊಲೀಸ್ ಠಾಣೆಯಿಂದ ನೂರು ಮೀಟರ್ ಅಂತರದಲ್ಲೇ ಜನರ ಮಧ್ಯೆಯೇ ಅಟ್ಟಾಡಿಸಿ ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ದುಷ್ಕರ್ಮಿಗಳ ಪತ್ತೆಗೆ ಶಿವಮೊಗ್ಗ ಪೊಲೀಸರು ತಂಡ ಕಟ್ಟಿಕೊಂಡು ಹುಡುಕಾಟ ನಡೆಸುತ್ತಿರುವಾಗಲೇ 8 ಆರೋಪಿಗಳು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗುವ ಮೂಲಕ ಪೊಲೀಸರಿಗೂ ಶಾಕ್ ನೀಡಿದ್ದರು. ಚಿಕ್ಕಮಗಳೂರು ಪೊಲೀಸರಿಂದ ಆರೋಪಿಗಳನ್ನು ವಶಕ್ಕೆ ಪಡೆದಿರುವ ಶಿವಮೊಗ್ಗ ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದು, ಆರೋಪಿಗಳು ಕೊಲೆಯ ಹಿಂದಿನ ಕಾರಣವನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳ ವಿಚಾರಣೆ:ಕೊಲೆ ಆರೋಪಿಗಳಾದ ಕಾಡಾ ಕಾರ್ತಿಕ್ ಅಲಿಯಾಸ್ ಕಾರ್ತಿಕ್, ನಿತಿನ್ ಅಲಿಯಾಸ್ ಭಜರಂಗಿ ಬಾಯ್, ಫಾರುಕ್, ಮಧು, ಆಂಜನೇಯ, ಚಂದನ್, ಮದನ್ ರಾಯ್, ಮಧುಸೂದನ್ ಅವರನ್ನು ಪೊಲೀಸರು ಶಿವಮೊಗ್ಗದ 5ನೇ ಜೆಎಂಎಫ್ಸಿ ಕೋರ್ಟ್ಗೆ ಹಾಜರು ಪಡಿಸಿದ್ದರಲ್ಲದೇ ಹೆಚ್ಚಿನ ವಿಚಾರಣೆಗೆ ಅವಕಾಶ ನೀಡುವಂತೆ ಕಾಲಾವಕಾಶ ಕೋರಿದ್ದರು. ಅದರಂತೆ ನ್ಯಾಯಾಲಯ 8 ದಿನಗಳ ಕಾಲ ಶಿವಮೊಗ್ಗ ಪೊಲೀಸರ ವಶಕ್ಕೆ ನೀಡಿದೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್, ವಾಹನ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ಆರಂಭಿಸಿದ್ದಾರೆ.