ಶಿವಮೊಗ್ಗ: ರೈತರ ಸಾಲ ಮನ್ನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ರೈತರ ಸಾಲಮನ್ನಾ ಪ್ರಕ್ರಿಯೆ ತ್ವರಿತಗೊಳಿಸುವಂತೆ ಸೂಚನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಿದರು. ಬೆಳೆ ಸಾಲಮನ್ನಾ ಪ್ರಕ್ರಿಯೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯ ಸಹಕಾರ ಬ್ಯಾಂಕುಗಳಲ್ಲಿ 33,886 ಅರ್ಹ ರೈತರು ಒಟ್ಟು 166 ಕೋಟಿ ರೂಪಾಯಿ ಸಾಲ ಮಾಡಿದ್ದು, ಇದರಲ್ಲಿ ಒಂದು ಲಕ್ಷದವರೆಗಿನ ಸಾಲದ ಮೊತ್ತ 139 ಕೋಟಿ ರೂಪಾಯಿ ಇದೆ. ಇವರ ಪೈಕಿ 1,480 ರೈತರು ಸುಸ್ತಿದಾರರಿದ್ದಾರೆ.
ಸಹಕಾರ ಬ್ಯಾಂಕುಗಳ ಸಾಲಕ್ಕೆ ಸಂಬಂಧಿಸಿದಂತೆ 21,808 ರೈತರ 74.4 ಕೋಟಿ ರೂ. ಸಾಲಮನ್ನಾ ಮೊತ್ತವನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ. 859 ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಗಳು ತಾಳೆಯಾಗದ ಕಾರಣ ವಿಲೇವಾರಿಗೆ ಬಾಕಿ ಇವೆ. ಇದರ ಮೊತ್ತ 3.10 ಕೋಟಿ ಇದೆ. ಈ ಪ್ರಕರಣಗಳನ್ನು ಆದಷ್ಟು ಬೇಗನೆ ಇತ್ಯರ್ಥಪಡಿಸಬೇಕು ಎಂದು ತಿಳಿಸಿದ್ದಾರೆ.
ಈಗಾಗಲೇ ಭದ್ರಾವತಿ ತಾಲೂಕಿನ 3,591 ರೈತರ 18 ಕೋಟಿ ರೂ., ಹೊಸನಗರದ 2,805 ರೈತರ 7.27 ಕೋಟಿ ರೂ., ಸಾಗರದ 2,805 ರೈತರ 7.61ಕೋಟಿ ರೂ., ಶಿಕಾರಿಪುರದ 4,524 ರೈತರ 11.91 ಕೋಟಿ ರೂಪಾಯಿ, ಶಿವಮೊಗ್ಗ ತಾಲೂಕಿನ 3,547 ರೈತರ 12.62 ಕೋಟಿ ರೂ., ಸೊರಬದ 1,492 ರೈತರ 6.89 ಕೋಟಿ ರೂ., ತೀರ್ಥಹಳ್ಳಿ ತಾಲೂಕಿನ 3,044 ರೈತರ 10 ಕೋಟಿ ರೂ. ಸಾಲ ಮನ್ನಾದ ಅನುದಾನವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.