ಶಿವಮೊಗ್ಗ:ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವಿರುದ್ಧ ಆರಗ ಜ್ಞಾನೇಂದ್ರ 12,241 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ವಿರುದ್ಧ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಕಲಮ ಅರಳಿಸಲು ಯಶಸ್ವಿಯಾಗಿದ್ದಾರೆ. ಒಂದೇ ವಿಧಾನಸಭಾ ಕ್ಷೇತ್ರ, ಒಂದೇ ಪಕ್ಷದಿಂದ ಸತತ 10ನೇ ಬಾರಿಗೆ ಆರಗ ಜ್ಞಾನೇಂದ್ರ ಸ್ಪರ್ಧೆ ಮಾಡಿದ್ದರು. ತೀರ್ಥಹಳ್ಳಿಯಲ್ಲಿ ಸತತ ಒಂದೇ ಪಕ್ಷದಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿ, 2018 ರಲ್ಲಿ ಸೇರಿ ಒಟ್ಟು ಐದನೇ ಬಾರಿ ಗೆಲುವು ಸಾಧಿಸಿದ್ದಾರೆ. ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಆರಗ ಜ್ಞಾನೇಂದ್ರರಿಗೆ ಇದೆ.
ಆರಗ ಜ್ಞಾನೇಂದ್ರ ರವರ ಪೂರ್ಣ ಪರಿಚಯ:ಆರಗ ಜ್ಞಾನೇಂದ್ರ ರವರು 1951ರ ಮಾರ್ಚ್ 15 ರಂದು ಜನಿಸಿದರು. ಇವರ ತಂದೆ ಹೆಸರು ರಾಮಣ್ಣ ಗೌಡ. ತಾಯಿ ಚಿನ್ನಮ್ಮ. ಪತ್ನಿ ಪ್ರಫುಲ್ಲ. ಇವರಿಗೆ ಇಬ್ಬರು ಮಕ್ಕಳು ಪುತ್ರ ಅಭಿನಂದನ್ ಹಾಗೂ ಪುತ್ರಿ ಅನನ್ಯ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಂತ ಗ್ರಾಮವಾದ ಆರಗದಲ್ಲಿ ಮುಗಿಸಿದರು. ನಂತರ ಕೋಣಂದೂರಿನ ರಾಷ್ಟ್ರೀಯ ಶಿಕ್ಷಣ ಸಮಿತಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಅಂದ್ರೆ 8 ರಿಂದ ಪಿಯುಸಿವರೆಗೂ ಮುಗಿಸಿದರು. ನಂತರ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿದರು.
ಬಿ.ಕಾಂ ಪದವಿಯಲ್ಲೇ ವಿದ್ಯಾರ್ಥಿ ನಾಯಕರಾಗಿ 1975 ರಲ್ಲಿ ಆಯ್ಕೆಯಾಗಿದ್ದಾರೆ. ಸ್ಥಳೀಯ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕಾಲೇಜು ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸಂಪರ್ಕದಲ್ಲಿದ್ದು, ಜಿಲ್ಲಾ ಪರಿಷತ್ ನ ಜಿಲ್ಲಾಧ್ಯಕ್ಷರಾಗಿದ್ದರು. 1975ರ ತುರ್ತು ಪರಿಸ್ಥಿತಿಯ ಹೋರಾಟದಲ್ಲಿ 6 ತಿಂಗಳ ಜೈಲು ವಾಸ ಅನುಭವಿಸಿದ್ದರು. ನಂತರ 1975 ರಲ್ಲಿ ತೀರ್ಥಹಳ್ಳಿ ತಾಲೂಕು ಬೋರ್ಡ್ ಚುನಾಬಣೆಯಲ್ಲಿ ಆಯ್ಕೆಯಾಗಿ ಸಕ್ರೀಯ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡರು.
ಚುನಾವಣಾ ರಾಜಕೀಯಕ್ಕೆ ಪ್ರವೇಶ:ಆರಗ ಜ್ಞಾನೇಂದ್ರ ರವರು 1983 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಅಲ್ಲದೆ ಸತತವಾಗಿ 1985 ಹಾಗೂ1989 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಸತತ ಸೋಲನ್ನು ಕಂಡರು ಸಹ ಆರಗ ಜ್ಞಾನೇಂದ್ರರನ್ನು ಪಕ್ಷ ಜಿಲ್ಲಾಧ್ಯಕ್ಷರಾನ್ನಾಗಿ ಮಾಡಿತ್ತು.