ನಾಯಿ ಸೆರೆ ಕಾರ್ಯಾಚರಣೆ ನಡೆಸುವಂತೆ ಬಾಲಕ ತಂದೆ ಒತ್ತಾಯ ಶಿವಮೊಗ್ಗ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಕಚ್ಚಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಸಾಗರ ನಗರಸಭೆಯ 25 ನೇ ವಾರ್ಡ್ನ ಜಗದೀಶ್ ಎಂಬುವರ ಮಗ ಪ್ರಜ್ವಲ್ ಎಂಬ ಬಾಲಕನ ಮೇಲೆ ನಿನ್ನೆ ಸಂಜೆ ನಾಯಿ ದಾಳಿ ಮಾಡಿದೆ.
ಎಂದಿನಂತೆ ಪ್ರಜ್ವಲ್ ತಮ್ಮ ಮನೆಯ ಮುಂದೆ ಆಟ ಆಡುತ್ತಿರುವಾಗ ಏಕಾಏಕಿ ನಾಯಿ ದಾಳಿ ನಡೆಸಿದೆ. ಬಳಿಕ ಬಾಲಕ ಕೆಳಗೆ ಬಿದ್ದಿದ್ದು, ಆತನ ಮುಖಕ್ಕೆ ಕಚ್ಚಿದೆ. ರಸ್ತೆಯಲ್ಲಿ ಓಡಾಡುತ್ತಿರುವವರು ನಾಯಿ ದಾಳಿ ನಡೆಸುತ್ತಿರುವುದನ್ನು ಗಮನಿಸಿ ಕೂಡಲೇ ನಾಯಿಯನ್ನು ಬೆದರಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ, ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
"ಸಾಗರ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದೆ. ಇವುಗಳು ಬೈಕ್ನಲ್ಲಿ ಹೋಗುವವರು ಹಾಗೂ ಸಣ್ಣ ಮಕ್ಕಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿವೆ. ಇದರಿಂದಾಗಿ ಜನ ಜೀವ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿ ಹಾವಳಿ ಕುರಿತು ನಗರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ನಗರಸಭೆ ಆಯುಕ್ತರು ಹಾಗೂ ಅಧ್ಯಕ್ಷರು ನಾಯಿಗಳನ್ನು ಹಿಡಿಸಿ ಬೇರೆ ಕಡೆ ಕಳುಹಿಸಬೇಕೆಂದು" ಬಾಲಕನ ತಂದೆ ಜಗದೀಶ್ ಮನವಿ ಮಾಡಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿ ದಾಳಿ : ಕಳೆದ ಆಗಸ್ಟ್ ತಿಂಗಳಿನಲ್ಲಿ ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿತ್ತು. ವಿರಾಜಪೇಟೆ ತಾಲೂಕಿನ ಪಾರಾಣೆ ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಕೆ ಕೆ ಭವ್ಯಾ ಮೇಲೆ ಸಾಕು ನಾಯಿ ದಾಳಿ ಮಾಡಿತ್ತು. ಹೆರಿಗೆ ಆಗಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು ತೆರಳಿದ್ದಾಗ ಘಟನೆ ಜರುಗಿತ್ತು. ಭವ್ಯಾ ಅವರ ಕೈ ಸೇರಿದಂತೆ ದೇಹದ ಹಲವು ಭಾಗಗಳಿಗೆ ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದ ಹಿನ್ನೆಲೆ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ :ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಸಮುದಾಯ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ: ಗಂಭೀರ ಗಾಯ
ಶಾಲಾ ಮಕ್ಕಳಿಗೆ ಕಚ್ಚಿದ ನಾಯಿ :ಇನ್ನು ಶಾಲಾ ಮಕ್ಕಳ ಮೇಲೆ ಬೀದಿನಾಯಿ ದಾಳಿ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕಳೆದ ಜೂನ್ ತಿಂಗಳಲ್ಲಿ ನಡೆದಿತ್ತು. ನಾಲ್ವರು ವಿದ್ಯಾರ್ಥಿಗಳು ಸೇರಿ ಐವರಿಗೆ ನಾಯಿ ಕಚ್ಚಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವಾಗ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಘಟನೆ ಬಳಿಕ ಪಟ್ಟಣ ಪಂಚಾಯಿತಿ ವತಿಯಿಂದ ನಾಯಿ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು.
ಇದನ್ನೂ ಓದಿ :ಧಾರವಾಡದಲ್ಲಿ ಶಾಲಾ ಮಕ್ಕಳು ಸೇರಿ ಐವರಿಗೆ ಕಚ್ಚಿ ಗಾಯಗೊಳಿಸಿದ ನಾಯಿ