ಶಿವಮೊಗ್ಗ:ಕೇವಲ ಅರ್ಧ ಗಂಟೆ ಸುರಿದ ಭಾರಿ ಮಳೆಗೆ ಬೊಮ್ಮನಕಟ್ಟೆಯ ಕೆರೆಯ ಕೋಡಿ ಒಡೆದಿದ್ದು, ಪರಿಣಾಮ 10 ಎಕರೆಗೂ ಅಧಿಕ ಭತ್ತದ ಜಮೀನು ಸಂಪೂರ್ಣ ಜಲಾವೃತವಾಗಿದೆ.
ಬೊಮ್ಮನಕಟ್ಟೆ ಕೆರೆ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 2 ರಲ್ಲಿ ಇದೆ. ಈ ಕೆರೆಯು 24 ಎಕರೆ ವಿಸ್ತಿರ್ಣದಲ್ಲಿದೆ. ಇದರ ಕೋಡಿ ಒಡೆದ ಪರಿಣಾಮ ನೀರು ರಾಜಾ ಕಾಲುವೆ ತಲುಪಿದ್ದು, ಭತ್ತದ ಗದ್ದೆಗೆ ನುಗ್ಗಿದೆ.
ಕೆರೆ ಕೆಳ ಭಾಗದಲ್ಲಿ 20 ಎಕರೆ ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಇಲ್ಲಿ ಸ್ವಲ್ಪ ಎತ್ತರದ ಪ್ರದೇಶದಲ್ಲಿನ ಭತ್ತದ ಗದ್ದೆಗಳಿಗೆ ನೀರು ನುಗ್ಗಿಲ್ಲ. ಕೆಳ ಭಾಗದ ಭತ್ತದ ಜಮೀನಿನಲ್ಲಿ ನೀರು ಹರಿದ ಪರಿಣಾಮ ಭತ್ತದ ಗದ್ದೆಗಳು ಕೆರೆಗಳಾಗಿ ಮಾರ್ಪಟ್ಟಿವೆ.
ಭತ್ತದ ಗದ್ದೆ ಕೆರೆಯಾಗಿ ಪರಿವರ್ತನೆ:ಕೆರೆ ಕೋಡಿ ಒಡೆಯುವ ಹಿಂದಿನ ದಿನ ತಮ್ಮ ತಮ್ಮ ಜಮೀನಿಗೆ ಬಂದಿದ್ದ ರೈತರು ಇಂದು ಬೆಳಗ್ಗೆ ಬಂದು ನೋಡಿದ್ರೆ, ಗದ್ದೆ ಸಂಪೂರ್ಣ ನೀರಿನಿಂದ ಆವೃತವಾಗಿವೆ. ಇದನ್ನು ಕಂಡು ಸ್ವತಃ ರೈತರೆ ಆಶ್ಚರ್ಯಚಕಿತರಾಗಿದ್ದಾರೆ. ತಮ್ಮ ಜಮೀನು ಎಲ್ಲಿ ಎಂದು ಹುಡುಕುವುದು ಸಹ ಕಷ್ಟವಾಗಿದ್ದು, ಅಲ್ಲದೇ ತಮ್ಮ ಜಮೀನಿನ ಬೇಲಿ, ಗುರುತು ನೋಡಿ ಇದೇ ನಮ್ಮ ಜಮೀನು ಎಂದು ಹೇಳುವ ಸ್ಥಿತಿ ಬಂದೋದಗಿರುವುದರಿಂದ ತಮಗೆ ಆಗಿರುವ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸಬೇಕೆಂಬುದು ರೈತರ ಆಗ್ರಹವಾಗಿದೆ.