ಶಿವಮೊಗ್ಗ: ಮಗಳನ್ನು ಕಾಲೇಜಿಗೆ ದಾಖಲಿಸಿ, ತಂದೆ ವಾಪಸ್ ಆಗುವಾಗ ಕಾಲೇಜು ಮುಂಭಾಗವೇ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಂದೆ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಹೊಸನಗರ ಪಟ್ಟಣದಲ್ಲಿ ನಡೆದಿದೆ.
ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಂತೂರು ನಿವಾಸಿ ಅಣ್ಣಪ್ಪ(43) ಮೃತ ವ್ಯಕ್ತಿ. ಅಣ್ಣಪ್ಪ ತಮ್ಮ ಮಗಳನ್ನು ಹೊಸನಗರದ ಕೊಡಚಾದ್ರಿ ಕಾಲೇಜಿಗೆ ದಾಖಲಿಸಿ ತಮ್ಮ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಮನೆಗೆ ವಾಪಸ್ ಆಗುವ ವೇಳೆ ಕಾಲೇಜು ಮುಂಭಾಗದಲ್ಲಿಯೇ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು.