ಶಿವಮೊಗ್ಗ:ಮಹಿಳೆಯೋರ್ವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 22 ಸಾವಿರ ರೂ ದಂಡ ವಿಧಿಸಿದೆ. 2016 ರಲ್ಲಿ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ಶೋಭಾ(26) ಮತ್ತು ಪತಿ ಹಾಲೇಶ್ ನಾಯ್ಕನಿಗೂ ಕೌಟಂಬಿಕ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದರಿಂದ 2016 ರಲ್ಲಿ ಶೋಭಾ ತನ್ನ ತಾಯಿಯೊಂದಿಗೆ ಮಲವಗೊಪ್ಪ ಬಸ್ ನಿಲ್ದಾಣದಲ್ಲಿ ನಿಂತಾಗ ಹಾಲೇಶ್ ನಾಯ್ಕ ಹರಿತವಾದ ಆಯುಧದಿಂದ ಆಕೆಯ ತಲೆ ಹಾಗೂ ಇತರೆ ಕಡೆ ಮಾರಾಣಾಂತಿಕ ಹಲ್ಲೆ ನಡೆಸಿದ್ದರು.
ಹಾಲೇಶ್ ನಾಯ್ಕನ ಜೊತೆ ರವಿ ನಾಯ್ಕ, ದಾದು ನಾಯ್ಕ್ ಹಾಗೂ ವೆಂಕ್ಯಾನಾಯ್ಕ್ ತನ್ನ ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಶೋಭ ಅವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 114, 307, 326, 504, 506 ರ ಅಡಿ ದೂರು ನೀಡಿದ್ದರು. ಈ ಪ್ರಕರಣದ ಕುರಿತು ಅಂದಿನ ಸಿಪಿಐ ಗಿರೀಶ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಾದ ಆಲಿಸಿದ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್ ಅವರು ಆರೋಪಿಗಳ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳಾದ ರವಿ ನಾಯಕ್ (28), ದಾದು ನಾಯ್ಕ(36) ಹಾಗೂ ವೆಂಕ್ಯಾನಾಯ್ಕ್(40) ಅವರಿಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಮೂರು ಜನಕ್ಕೆ ತಲಾ 22 ಸಾವಿರ ರೂ ದಂಡ ವಿಧಿಸಿದೆ. ಒಂದು ವೇಳೆ ಹಣ ಕಟ್ಟಲು ಆಗದೆ ಹೋದರೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ವಾದ ಮಂಡಿಸಿದ್ದರು.