ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ನಮಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವಂತಹದ್ದು ಸರಿಯಲ್ಲ ಎಂದು ಹೇಳಿದರು.
ವಿದ್ಯುತ್ ಯೂನಿಟ್ ದರ ಹೆಚ್ಚಳ ಮಾಡಿರುವುದಲ್ಲದೇ, 200ರ ಬದಲು 201 ಯೂನಿಟ್ ಬಳಕೆ ಮಾಡಿದರೂ ಪೂರ್ಣ ದರ ಕಟ್ಟಿಸಿಕೊಂಡು ಸಬ್ಸಿಡಿ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಇಬಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಕೆಲಸವನ್ನು ಬಿಜೆಪಿ ಆರಂಭಿಸಿದೆ ಎಂದರು.
ಸಂಪರ್ಕ್ ಸೆ ಸಮರ್ಥನ್ ಕಾರ್ಯಕ್ರಮ:ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಸಂಪರ್ಕ್ ಸೆ ಸಮರ್ಥನ್ ಕಾರ್ಯಕ್ರಮದಡಿ ಕಾರ್ಯಕರ್ತರು, ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಂತಹ ವಿಶೇಷ ಕಾರ್ಯಕ್ರಮ ಇಡೀ ದೇಶಾದ್ಯಂತ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಸಾಧನೆಗಳನ್ನು ಚರ್ಚೆ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಅಪೂರ್ಣಗೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ಹಾಗೂ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ವಿಕಾಸ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಪಿಡ್ ಆಕ್ಷನ್ ಫೋರ್ಸ್ ಸ್ಥಾಪನೆ:ಭದ್ರಾವತಿ ಬುಳ್ಳಾಪುರ ಗ್ರಾಮದಲ್ಲಿ 50.29 ಎಕರೆ ಪ್ರದೇಶದಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಸ್ಥಾಪನೆಗೆ ಅಮಿತ್ ಶಾ ಅವರು ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದಾರೆ. ರಾಪಿಡ್ ಅಕ್ಷನ್ ಫೋರ್ಸ್ ಕರ್ನಾಟಕದ 31 ಜಿಲ್ಲೆಗಳನ್ನೊಳಗೊಂಡಿದ್ದಷ್ಟೇ ಅಲ್ಲದೇ, ಕೇರಳದ 4 ಜಿಲ್ಲೆಗಳು, ಗೋವಾದ 2 ಜಿಲ್ಲೆಗಳು, ಲಕ್ಷದ್ವೀಪದ 1 ಜಿಲ್ಲೆ ಹಾಗೂ ಪುದುಚೆರಿಯ 1 ಜಿಲ್ಲೆಗಳ ವ್ಯಾಪ್ತಿಯನ್ನು ಸಹ ಒಳಗೊಂಡಿರುತ್ತದೆ. ಕಮಾಂಡೆಂಟ್, ಡೆಪ್ಯುಟಿ ಕಮಾಂಡೆಂಟ್ ಸೇರಿದಂತೆ ಒಟ್ಟು 445 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
2009ಕ್ಕೂ ಮೊದಲು ಕೇವಲ 8-10 ರೈಲುಗಳ ಓಡಾಟ ಇತ್ತು. ಇದೀಗ 28 ಟ್ರೇನ್ಗಳ ಟ್ರಿಪ್ ಓಡಾಟ ಆರಂಭವಾಗಿದೆ. ಎರಡು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣವಾಗಿದೆ.(ಭದ್ರಾವತಿ ತರೀಕೆರೆ ರಸ್ತೆಯಲ್ಲಿ, ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ), ಇನ್ನೂ ನಾಲ್ಕು ರೈಲ್ವೆ ಓವರ್ ಬ್ರಿಡ್ಜ್ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾ.ಹೆ.206 ತುಮಕೂರಿನಿಂದ ಶಿವಮೊಗ್ಗದ ವರೆಗಿನ 214.45 ಕಿ.ಮೀ ಉದ್ದದ 4 ಪಥದ ರಸ್ತೆಯ ನಿರ್ಮಾಣ ರೂ. 7162 ಕೋಟಿ, ರಾ.ಹೆ. 13 ಚಿತ್ರದುರ್ಗ ಶಿವಮೊಗ್ಗ ರಸ್ತೆಯ ಬಾಕಿ ಉಳಿದ ಕಾಮಗಾರಿಗಳು 5169 ಕೋಟಿ ರೂ.ಕಾಮಗಾರಿ ಪ್ರಾರಂಭಗೊಂಡು ಶೇ 10ರಷ್ಟು ಕೆಲಸ ಮುಗಿದಿದೆ.ಹೊಳೆಹೊನ್ನೂರಿನ ಬೈಪಾಸ್ ರಸ್ತೆ ಮತ್ತು ಭದ್ರಾನದಿಗೆ ಸೇತುವೆ ಸೇರಿದಂತೆ ಕೈಮರದಿಂದ ಶಿವಮೊಗ್ಗವರೆಗಿನ ರಸ್ತೆ ಕೆಲಸ ಪ್ರಗತಿಯಲ್ಲಿವೆ.