ಶಿವಮೊಗ್ಗ: ನಗರದ ಹೊರ ಭಾಗದ ಹೊಸ ಬಡಾವಣೆಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು 96.50 ಕೋಟಿ ರೂ. ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಾಜನೂರು ಅಣೆಕಟ್ಟೆಯಿಂದ ಶಿವಮೊಗ್ಗ ನಗರದ ಪ್ರತೀ ಮನೆಗೆ ನೀರು ಸರಬರಾಜು ಮಾಡುವ 130.70 ಕೋಟಿ ರೂ. ವೆಚ್ಚದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಶೇ 55ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶಿವಮೊಗ್ಗ ನಗರದ ಹೊರಭಾಗದ ಕೆಲವು ಮಂಡಲ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳು ಹಾಗೂ ನಿರ್ಮಾಣಗೊಂಡಿರುವ ಹೊಸ ವಸತಿ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲು 96.50 ಕೋಟಿ ರೂ. ಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸಂಪುಟದ ಅನುಮೋದನೆ ದೊರೆತಿದ್ದು, ಆದಷ್ಟು ಬೇಗನೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಗೌರವ ಸಂಭಾವನೆ ಹೆಚ್ಚಳ:
ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಗೌರವ ಸಂಭಾವನೆಯನ್ನು ರೂ.7 ಸಾವಿರದಿಂದ ರೂ.12 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಭಾವನೆ ಹೆಚ್ಚಳ ಇದೇ ಜೂನ್ ತಿಂಗಳಿನಿಂದ ಜಾರಿಯಾಗಲಿದೆ. ಇದೀಗ ಗ್ರಂಥಾಲಯ ಅವಧಿಯನ್ನು ಬೆಳಗ್ಗೆ 9 ರಿಂದ 11ರವರೆಗೆ ಮತ್ತು ಮಧ್ಯಾಹ್ನ 4 ರಿಂದ 6 ಗಂಟೆಯವರೆಗೆ ಹೆಚ್ಚಿಸಲಾಗಿದೆ. ಈ ಮೊದಲ ಶಿಕ್ಷಣ ಇಲಾಖೆ ಅಧೀನದಲ್ಲಿದ್ದ 5633 ಗ್ರಾಮೀಣ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.