ಶಿವಮೊಗ್ಗ:ದೇಶದ 543 ಲೋಕಸಭಾ ಕ್ಷೇತ್ರಗಳ ಹೆಸರು ಹೇಳಿ ಅಂತ ಯಾರಿಗಾದ್ರೂ ಕೇಳಿದ್ರೆ ಅವರು ಗೊಂದಲಕ್ಕೀಡಾಗಬಹುದು. ಆದ್ರೆ, ನಗರದ 7 ವರ್ಷದ ಪೋರ ಮಾತ್ರ ನೀರು ಕುಡಿದಷ್ಟೇ ಸಲೀಸಾಗಿ ಹೇಳಿ ಮುಗಿಸುತ್ತಾನೆ.
ಈತನಿಗೆ ದೇಶದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರದ ಹೆಸರು ಹೇಳು ಅಂದ್ರೆ ಸಾಕು ಪಟಪಟನೆ ಹೇಳಿ ಮುಗಿಸಿ, ಮತ್ತೆ ಯಾವುದು ಹೇಳಬೇಕು ಅಂತ ಕೇಳುತ್ತಾನೆ. ಹೀಗೆ ದೇಶದ ಲೋಕಸಭಾ ಕ್ಷೇತ್ರಗಳ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸುವ ಪೋರನ ಹೆಸರು ಇಂದ್ರಜಿತ್.
ದೇಶದ 543 ಲೋಕಸಭಾ ಕ್ಷೇತ್ರದ ಹೆಸರು ಹೇಳುವ ಪೋರ ಇಂದ್ರಜಿತ್ ದೇಶದ ಅತಿ ಹೆಚ್ಚು ಮತದಾರು ಹೊಂದಿರುವ ಕ್ಷೇತ್ರ ತಲಂಗಾಣದ ಮಲ್ಕಜ್ ಗಂಜ್ ಹಾಗೂ ದೇಶದ ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಲಕ್ಷದ್ವೀಪ... ಹೀಗೆ ದೇಶದ ವಿಶೇಷ ಲೋಕಸಭಾ ಕ್ಷೇತ್ರದ ಹೆಸರನ್ನು ಹೇಳುವ ಜೊತೆಗೆ ದೇಶದ ಎಲ್ಲಾ ಪ್ರದಾನಮಂತ್ರಿಗಳ ಹೆಸರನ್ನು ಸಹ ಒಂದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾನೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಕುಮಾರ್ ಹಾಗೂ ಆಶಾ ಅವರ ಏಕೈಕ ಪುತ್ರನಾದ ಇಂದ್ರಜಿತ್, ಈ ಮೂಲಕ ಇದೀಗ ಎಲ್ಲರ ಗಮನ ಸಳೆದಿದ್ದಾನೆ.
ಶಿವಕುಮಾರ್ ತಮ್ಮ ಮಗನಿಗೆ ಕಳೆದ ಮೂರು ತಿಂಗಳಿನಿಂದ ಲೋಕಸಭಾ ಕ್ಷೇತ್ರಗಳ ಹೆಸರನ್ನು ಹೇಳಿ ಕೊಟ್ಟಿದ್ದಾರಂತೆ. ಇದರ ಪರಿಣಾಮ ದೇಶದ 543 ಲೋಕಸಭಾ ಕ್ಷೇತ್ರಗಳ ಹೆಸರನ್ನು ನೀರು ಕುಡಿದಷ್ಟು ಸಲೀಸಾಗಿ ಹೇಳುತ್ತಿದ್ದಾನೆ. ಇಂದ್ರಜಿತ್ ಕೇವಲ ಲೋಕಸಭಾ ಕ್ಷೇತ್ರಗಳ ಹೆಸರನ್ನು ಹೇಳುವುದಷ್ಟೆ ಅಲ್ಲದೆ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಿ ಎಂದೂ ಮನವಿ ಮಾಡುತ್ತಿದ್ದಾನೆ. ಇಂದ್ರಜಿತ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಚುನಾವಣೆಯ ಅಂಬಾಸಿಡರ್ ಆಗಿದ್ದ.