ಶಿವಮೊಗ್ಗ: ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿರುವುದಲ್ಲದೆ, ಮೂಕ ಪ್ರಾಣಿಗಳಿಗೂ ಕಂಟಕವಾಗುತ್ತಿದೆ. ಹಸುವಿನ ಹೊಟ್ಟೆಯಲ್ಲಿ 50 ಕೆ.ಜಿಗೂ ಹೆಚ್ಚು ಕೆ.ಜಿ ಪ್ಲಾಸ್ಟಿಕ್ ಪತ್ತೆಯಾದ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸದಾನಂದ ಎಂಬುವರ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಹಸು ಅತಿಯಾದ ಹೊಟ್ಟೆ ಉಬ್ಬರ, ನಿಶ್ಯಕ್ತಿಯಿಂದ ಬಳಲುತ್ತಿತ್ತು, ಅಲ್ಲದೆ ತಿಂದ ಆಹಾರವು ಅದರ ಮೂಗಿನಿಂದ ಹೊರಬರಲಾರಂಭಿಸಿತ್ತು. ಇದನ್ನು ಗಮನಿಸಿದ ಪ್ರಾಣಿ ದಯಾ ಸಂಘದ ಸದಸ್ಯರು ಹಸುವಿನ ಮಾಲೀಕರ ಮನವೊಲಿಸಿ ತೀರ್ಥಹಳ್ಳಿ ಪಶು ವೈದ್ಯ ಡಾ.ಯುವರಾಜ ಹೆಗಡೆ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯರು ಹಸುವನ್ನು ಪರೀಕ್ಷಿಸಿ ಅದು ತಿಂದ ವಸ್ತುಗಳು ಹೊಟ್ಟೆಯಲ್ಲಿ ಹಾಗೆಯೇ ಉಳಿದುಕೊಂಡಿರುವುದರಿಂದ ಅಜೀರ್ಣವಾಗುತ್ತದೆ ಎಂದು ತಕ್ಷಣ 'ರುಮಿನಾಟಮಿ' ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈ ವೇಳೆ ಹಸುವಿನ ಹೊಟ್ಟೆಯಲ್ಲಿದ್ದ ಸುಮಾರು 50 ಕೆ. ಜಿ.ಗಳಷ್ಟು ಪ್ಲಾಸ್ಟಿಕ್ ಹೊರ ತೆಗೆಯಲಾಗಿದೆ.