ಶಿವಮೊಗ್ಗ:ಮಲೆನಾಡನಲ್ಲಿ ಜೀವನಾಡಿಯಾಗಿ ಹರಿಯುವ ಭದ್ರಾ ಜಲಾಶಯ 186 ಅಡಿ ಗರಿಷ್ಠ ಮಟ್ಟವನ್ನು ಹೊಂದಿದ್ದು. ಇಂದು ಜಲಾಶಯದಲ್ಲಿ 184.4 ಅಡಿ ನೀರು ಸಂಗ್ರಹವಾಗಿದೆ. ಆದರೆ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯದಲ್ಲಿ ಇಂಜಿನಿಯರ್ಗಳ ಪೂಜೆ ಸಲ್ಲಿಸುವ ಮೂಲಕ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಬರುತ್ತಿದೆ. ಇದರಿಂದ ಜಲಾಶಯದ ಹಿತದೃಷ್ಟಿಯಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ವಿಶ್ವೇಶ್ವರಯ್ಯರಿಂದ ನಿರ್ಮಿಸಲ್ಪಟ್ಟ ಜಲಾಶಯ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟುವ ಭದ್ರಾನದಿಗೆ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಪ್ರಪಂಚ ಕಂಡ ಅದ್ಭುತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ನಿರ್ಮಿಸಲ್ಪಟ್ಟ ಜಲಾಶಯ ಇದಾಗಿದೆ. ಈ ಜಲಾಶಯದ ನಿರ್ಮಾಣ 1947 ರಿಂದ ಪ್ರಾರಂಭವಾಗಿ 1965 ರಲ್ಲಿ ಮುಕ್ತಾಯವಾಗಿತ್ತು. ಈ ಜಲಾಶಯವು 71.50 ಟಿಎಂಸಿ ನೀರು ಸಂಗ್ರಹ ಸಾರ್ಮಥ್ಯ ಹೊಂದಿದೆ.
ವಿವಿಧ ಜಿಲ್ಲೆಗಳ ಜೀವನಾಡಿ:
ಡೆಡ್ ಸ್ಟೋರೇಜ್ 8.50 ಟಿಎಂಸಿ ಹಾಗೂ ಬಳಕೆಗೆ 63 ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿದೆ. ಜಲಾಶಯದಿಂದ ಎಡ ಹಾಗೂ ಬಲದಂಡೆ ಕಾಲುವೆಯ ಮೂಲಕ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗೆ ನೀರು ಹರಿಸಲಾಗುತ್ತದೆ. ಈಗ ಹೊಸದಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಲಾಗಿದ್ದು, ಇಲ್ಲಿಂದ ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ನೀಡಲಾಗುತ್ತಿದೆ.