ಶಿವಮೊಗ್ಗ:ತನ್ನ ಸ್ವಂತ ಹೊಲದಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ 67 ವರ್ಷದ ವೃದ್ಧನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಜಿಲ್ಲೆಯ ರೆಚಿಕೊಪ್ಪ ಗ್ರಾಮದ ನಿವಾಸಿ ನಾರಾಯಣ ಎಂಬ ವೃದ್ಧ ಸೂಡೂರು ಗ್ರಾಮದ ಸರ್ವೆ ನಂಬರ್ 201 ರ ತನ್ನ ಭೂಮಿಯಲ್ಲಿ 235 ಕೆ.ಜಿ.ತೂಕದ 75 ಗಾಂಜಾ ಗಿಡಗಳನ್ನು ಬೆಳೆದಿದ್ದನು. ಈ ಗಾಂಜಾ ಗಿಡದ ದಂಧೆಯನ್ನು 2015 ರಿಂದಲೇ ಆರಂಭ ಮಾಡಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕುಂಸಿ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದರು. ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದು ತೀರ್ಪು ನೀಡಲಾಗಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಹೀರೆಮಠ್ ರವರು ಆರೋಪಿ ನಾರಾಯಣರವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.