ಶಿವಮೊಗ್ಗ: ಸಾಗರ ಪಟ್ಟಣದ ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು. ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು, ಸಮೀರ್(ಎ1), ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಹಲ್ಲೆ ಪ್ರಕರಣದ ಎ1 ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಸುನೀಲ್ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವುದಾಗಿ ತನಿಖೆ ವೇಳೆ ಸಮೀರ್ ಬಾಯ್ಬಿಟ್ಟಿದ್ದಾನೆ ಎಂದು ತಿಳಿಸಿದರು.
ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್ಗೆ ಸಮೀರ್ ಎಚ್ಚರಿಕೆ ನೀಡಿದ್ದ. ಅಲ್ಲದೇ ತಂಗಿಯ ನಂಬರ್ ಕೊಡು ಅಂತ ಸಮೀರ್ಗೆ ಸುನೀಲ್ ಕೇಳಿದ್ದನಂತೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಚುಡಾಯಿಸುವುದನ್ನು ನಿಲ್ಲಿಸಿರಲಿಲ್ಲ. ಅದರಂತೆಯೇ ಸೋಮವಾರ ಬೈಕ್ನಲ್ಲಿ ಬರುತ್ತಿದ್ದ ಸಮೀರ್ನನ್ನು ಸುನೀಲ್ ರೇಗಿಸಿದ್ದ. ಇದರಿಂದ ಕೋಪಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಹೇಳಿದ್ದಾನೆ. ಅಲ್ಲದೇ ಸಮೀರ್ ಒಬ್ಬ ಕುರಿಗಾಹಿ ಯುವಕನಾಗಿದ್ದು, ಎಂದಿನಂತೆ ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಕತ್ತಿಯನ್ನು ಇಟ್ಟುಕೊಂಡಿದ್ದ. ಅದರಿಂದಲೇ ಹಲ್ಲೆಗೆ ಮುಂದಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದರು.