ಶಿವಮೊಗ್ಗ:ಜಲಾಮೃತ ಯೋಜನೆಯಡಿ ಕೆರೆಗಳ ಹೂಳೆತ್ತುವುದು ಸೇರಿದಂತೆ, ಕೆರೆಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 25ಕೋಟಿ ರೂಪಾಯಿ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ 3.89 ಕೋಟಿ ರೂಪಾಯಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆಯೆಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಲಾಮೃತ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯಿಂದ 33 ಕೆರೆಗಳ ಅಭಿವೃದ್ಧಿಗೆ ಸಲ್ಲಿಸಲಾಗಿದ್ದ 3.89ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. ಅದಕ್ಕೂ ಮೊದಲು ಸ್ಥಳೀಯವಾಗಿ ಕೆರೆ ನೀರು ಬಳಕೆದಾರರ ಸಂಘದ ಸಭೆ ನಡೆಸಿದ ಕಾಮಗಾರಿಗೆ ಅನುಮೋದನೆ ಸೇರಿದಂತೆ ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಲಾಮೃತ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ 25ಕೋಟಿ ರೂ. ಕ್ರಿಯಾ ಯೋಜನೆ ಸಲ್ಲಿಕೆ: ಕೆ.ಬಿ.ಶಿವಕುಮಾರ್ ಇನ್ನು ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಆದರೆ ಮೂರು ತಾಲೂಕುಗಳಿಂದ 142ಕೆರೆಗಳ ಅಭಿವೃದ್ಧಿಗೆ 12.68 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳುವ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಇದರಲ್ಲಿ ಶಿಕಾರಿಪುರ ತಾಲೂಕಿನಲ್ಲಿ 2ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಕೆರೆಗಳ ಅಭಿವೃದ್ಧಿ, ಹೊಸನಗರ ತಾಲೂಕಿನಲ್ಲಿ 9.69 ಕೋಟಿ ರೂ. ವೆಚ್ಚದಲ್ಲಿ 117ಕೆರೆಗಳ ಅಭಿವೃದ್ಧಿ, ಶಿವಮೊಗ್ಗ ತಾಲೂಕಿನಲ್ಲಿ 77ಲಕ್ಷ ರೂ. ವೆಚ್ಚದಲ್ಲಿ 16 ಕೆರೆಗಳ ಅರಣ್ಯೀಕರಣ ಕಾಮಗಾರಿ ಹಾಗೂ ಹೊಸನಗರ ತಾಲೂಕಿನಲ್ಲಿ 3 ಬಹುಕಮಾನು ಮಾದರಿ ಚೆಕ್‍ಡ್ಯಾಂ ನಿರ್ಮಾಣಕ್ಕಾಗಿ 18ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಇನ್ನುಳಿದ ತಾಲೂಕುಗಳಿಂದ ಪ್ರಸ್ತಾವನೆಗಳನ್ನು ಆದಷ್ಟು ಬೇಗನೆ ಸಲ್ಲಿಸುವಂತೆ ಅವರು ತಿಳಿಸಿದರು.
ಅಲ್ಲದೇ, ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಮೂಲಗಳ ಪುನಶ್ಚೇತನ ಮತ್ತು ಹಸರೀಕರಣ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಕಲ್ಯಾಣಿ, ಪುಷ್ಕರಣಿ, ಕುಂಟೆ, ಕೆರೆಕಟ್ಟೆ, ಗೋಕಟ್ಟೆಗಳ ಸಂರಕ್ಷಣೆ ಹಾಗೂ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗುತ್ತಿದೆ. ಯೋಜನೆ ಅನುಷ್ಠಾನದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‍ಗಳ ಪಾತ್ರ ಮುಖ್ಯವಾಗಿದೆಯೆಂದು ಹೇಳಿದರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಯೋಜನಾ ನಿರ್ದೇಶಕ ವೀರಾಪುರ, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ದೇಸಾಯಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಸದಾಶಿವ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.