ಶಿವಮೊಗ್ಗ : ಕ್ಷುಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವೆ ಟಿಪ್ಪು ನಗರದಲ್ಲಿ ಗಲಾಟೆ ನಡೆದಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆಯಲ್ಲಿ ಹೋಗುವಾಗ ಬೈಕ್ ಮತ್ತು ಆಟೋ ನಡುವೆ ಡಿಕ್ಕಿಯಾಗಿದೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಸಂದೇಶ್ ಎಂಬಾತನ ಕಣ್ಣಿನ ಬಳಿ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚೂಪಾದ ಆಯುಧದಿಂದ ಹಲ್ಲೆ : ಇನ್ನು ದ್ರೌಪದಮ್ಮ ಸರ್ಕಲ್ ಬಳಿ ವಿಜಯ್ ಕುಮಾರ್ ಎಂಬಾತನ ಮೇಲೆ ಭಾನುವಾರ ಸಂಜೆ ಚೂಪಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಗುರುಸಿದ್ದಪ್ಪ ಮತ್ತು ತಸ್ರು ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ವಿಜಯ್ ಆರೋಪಿಸಿದ್ದಾನೆ. ಇದು ವೈಯಕ್ತಿಕ ದ್ವೇಷಕ್ಕೆ ನಡೆದ ಹಲ್ಲೆಯಾಗಿದ್ದು, ತನಿಖೆ ಬಳಿಕ ಪ್ರಕರಣ ದಾಖಲು ಮಾಡಲಾಗುವುದು ಎಂದು ಮಿಥುನ್ ಕುಮಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ : ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್‌ನಲ್ಲಿ ನಡೆದ ಹಲ್ಲೆ ಪ್ರಕರಣಗಳ ವಿಚಾರ ತಿಳಿದು ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾತ್ರಿ ಮೆಗ್ಗಾನ್ ಆಸ್ಪತ್ರೆ ಮುಂಭಾಗ ಸೇರುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ :ಮಹಿಳೆ ಕೊಲೆ ಯತ್ನ ಪ್ರಕರಣ - ಆರೋಪಿಗಳಿಗೆ 2 ವರ್ಷ ಕಾರಾಗೃಹ, 22 ಸಾವಿರ ರೂ. ದಂಡ