ಶಿವಮೊಗ್ಗ: ಮಾರಣಾಂತಿಕ ರೋಗ ಮಂಗನ ಕಾಯಿಲೆಗೆ ಹೊಸನಗರ ತಾಲೂಕು ಅರಮನೆ ಕೊಪ್ಪ ಗ್ರಾಮದ 18 ವರ್ಷ ಯುವತಿ ಸಾವನ್ನಪ್ಪಿದ್ದಾರೆ. ಕಳೆದ ವಾರ ಯುವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ತೀವ್ರ ಜ್ವರಕ್ಕೆ ತುತ್ತಾಗಿದ್ದ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜ್ವರ ಕಡಿಮೆಯಾಗದ ಕಾರಣಕ್ಕೆ ಯುವತಿಯನ್ನು ಶುಕ್ರವಾರ ಮಣಿಪಾಲಕ್ಕೆ ಶಿಫ್ಟ್ ಮಾಡಲಾಗಿತ್ತು. ದುರಾದೃಷ್ಟವಶಾತ್ ಯುವತಿ ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಯುವತಿ ಸಾವಿನ ಕುರಿತು ಈಟಿವಿ ಭಾರತ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, "ಯುವತಿಯು ಅರಮನೆಕೊಪ್ಪದ ನಿವಾಸಿಯಾಗಿದ್ದು, ಈಕೆಗೆ ಜ್ವರ ಬಂದು ಒಂದೆರಡು ದಿನವಾದರೂ ಕಡಿಮೆಯಾಗದ ಕಾರಣಕ್ಕೆ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಂದಾಗ ತಪಾಸಣೆ ನಡೆಸಿ ವೈದ್ಯರು, ಅನುಮಾನಗೊಂಡು ರಕ್ತ ಪರೀಕ್ಷೆ ನಡೆಸಿದಾಗ ಯುವತಿಯ ರಕ್ತದಲ್ಲಿ ಪ್ಲೇಟ್ಲೆಟ್ ಕಡಿಮೆಯಾಗಿತ್ತು. ಆರ್ಟಿಪಿಸಿಆರ್ ನಲ್ಲಿ ಮೊದಲು ಪರೀಕ್ಷಿಸಿದಾಗ ನೆಗೆಟಿವ್ ಬಂದಿತ್ತು. ಮತ್ತೆರಡು ಬಾರಿ ಪರೀಕ್ಷಿಸಿದಾಗ ಕೆಎಫ್ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಪಾಸಿಟಿವ್ ಬಂದಿತ್ತು ಎಂದರು.