ಶಿವಮೊಗ್ಗ: ಮೋದಿ ಅವರ ನೇತೃತ್ವದ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಕಳೆದ ಏಳು ವರ್ಷದ ಅವದಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ 12 ರಿಂದ 15 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಸೇವಾ ಮನೋಭಾವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಏಳು ವರ್ಷದ ಅವಧಿಯಲ್ಲಿ ಕೃಷಿ, ಸಾಫ್ಟ್ವೇರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ 12 ರಿಂದ 15 ಕೋಟಿ ಉದ್ಯೋಗವನ್ನು ಮೋದಿಯವರ ನೇತೃತ್ವದ ಸರ್ಕಾರ ಯುವಕರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಪ್ರತಿ ಪಕ್ಷದವರು ರಸ್ತೆಯಲ್ಲಿ ಪಕೋಡಾ ಮಾರಿ ಪ್ರತಿಭಟನೆ ಮಾಡಿ ಸುಳ್ಳು ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್ಥಿಕ ಭದ್ರತೆ, ಸಾಮಾಜಿಕ ಭದ್ರತೆ, ಕೃಷಿ ಕ್ಷೇತ್ರಗಳಿಗೆ ಶಕ್ತಿ ತುಂಬುವ ಕೆಲಸವನ್ನು ಹಾಗೂ ಯುವಕರಿಗೆ ಸ್ವಾಭಿಮಾನದ ಬದುಕನ್ನು ಬದುಕುವ ಅವಕಾಶವನ್ನು ನರೇಂದ್ರ ಮೋದಿಯವರ ಸರ್ಕಾರ ಒದಗಿಸಿಕೊಟ್ಟಿದೆ ಎಂದು ರಾಘವೇಂದ್ರ ಪ್ರತಿಪಾದಿಸಿದರು.
ಒಂದು ವೇಳೆ 370 ಆರ್ಟಿಕಲ್ ಹಿಂಪಡೆಯದೇ ಹೊದರೆ ಅಫ್ಘಾನಿಸ್ತಾನದ ರೀತಿ ಜಮ್ಮುಮತ್ತು ಕಾಶ್ಮೀರ ಉಗ್ರಗಾಮಿಗಳ ತಾಣ ಆಗುತ್ತಿತ್ತು. ಆದರೆ, ಆ ಆಪತ್ತಿನಿಂದ ಮೋದಿ ಹಾಗೂ ಅಮೀತ್ ಶಾ ಅವರು ಕಾಪಾಡಿದ್ದಾರೆ ಎಂದು ಹೊಗಳಿದರು.
ನಂತರ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, ರಾಜೀವ್ ಗಾಂಧಿ ಅವರೇ ಹೇಳಿದ್ದರು ಸರ್ಕಾರ ಒಂದು ಯೋಜನೆಗೆ ನೂರು ರೂ. ಬಿಡುಗಡೆ ಮಾಡಿದರೆ ಅದು ಹೋಗಿ ತಲುಪುವುದು ಕೇವಲ15 ರೂ. ಮಾತ್ರ ಎಂದು. ಆದರೆ, ಇಂದು ಕಟ್ಟ ಕಡೆಯ ಪಲಾನುಭವಿಗೂ ನೂರಕ್ಕೆ ನೂರು ರೂಪಾಯಿ ತಲುಪುತ್ತಿದೆ ಅದಕ್ಕೆ ಕಾರಣ ನರೇಂದ್ರ ಮೋದಿಯವರು ಎಂದು ಬಣ್ಣಿಸಿದರು.